ಭಾರತದ ಈ ನಗರದಲ್ಲಿ ಕಾರುಗಳದ್ದೇ ಕಾರುಬಾರು!

Update: 2019-03-25 03:55 GMT

ಮುಂಬೈ, ಮಾ.25: ಮಹಾನಗರದಲ್ಲಿ ಕಾರುಗಳ ಸಂಖ್ಯೆ ಕೇವಲ ಎರಡು ವರ್ಷಗಳಲ್ಲಿ ಶೇಕಡ 18ರಷ್ಟು ಹೆಚ್ಚಳವಾಗಿದ್ದು, ಮುಂಬೈ ನಗರ ದೇಶದಲ್ಲೇ ಅತಿಹೆಚ್ಚು ಕಾರು ದಟ್ಟಣೆಗಳ ನಗರ ಎನಿಸಿಕೊಂಡಿದೆ. ಪ್ರತಿ ಒಂದು ಕಿಲೋಮೀಟರ್ ರಸ್ತೆಗೆ 510 ಕಾರುಗಳನ್ನು ಹೊಂದಿದ್ದು, ಎರಡನೇ ಸ್ಥಾನದಲ್ಲಿರುವ ದಿಲ್ಲಿ (108) ನಗರಕ್ಕಿಂತ ಐದು ಪಟ್ಟು ಅಧಿಕ ಕಾರುಗಳನ್ನು ಹೊಂದಿದೆ.

ಪುಣೆ (ಕಿಲೋಮೀಟರ್‌ಗೆ 359), ಕೊಲ್ಕತ್ತಾ (319), ಚೆನ್ನೈ (297) ಹಾಗೂ ಬೆಂಗಳೂರು (149) ನಂತರದ ಸ್ಥಾನಗಳಲ್ಲಿವೆ ಎಂದು ಆಯಾ ರಾಜ್ಯಗಳ ಸಾರಿಗೆ ಇಲಾಖೆ ಅಂಕಿಅಂಶಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಮುಂಬೈಯಲ್ಲಿ ಕಾರುದಟ್ಟಣೆಗೆ ಮುಖ್ಯ ಕಾರಣವೆಂದರೆ ರಸ್ತೆಗೆ ಜಾಗ ಕಡಿಮೆ ಇರುವುದು. ಮುಂಬೈನಲ್ಲಿ ಖಾಸಗಿ ಕಾರುಗಳ ಒಟ್ಟು ಸಂಖ್ಯೆ ದಿಲ್ಲಿಯ ಮೂರನೇ ಒಂದರಷ್ಟಿದ್ದರೂ, ಮುಂಬೈ ನಗರ ಕೇವಲ 2,000 ಕಿಲೋಮೀಟರ್ ರಸ್ತೆಗಳನ್ನು ಮಾತ್ರ ಹೊಂದಿದೆ. ಆದರೆ ರಾಷ್ಟ್ರ ರಾಜಧಾನಿಯಲ್ಲಿ 28 ಸಾವಿರ ಕಿಲೋಮೀಟರ್ ರಸ್ತೆ ಇದೆ. ಜಾಗದ ಇಕ್ಕಟ್ಟು ಮತ್ತು ಹೆಚ್ಚುತ್ತಿರುವ ವಾಹನ ಸಂಖ್ಯೆಯಿಂದಾಗಿ ಮುಂಬೈಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ, ಮಾಲಿನ್ಯ ಮತ್ತು ರಸ್ತೆಗಳಲ್ಲಿ ಅನಧಿಕೃತ ಪಾರ್ಕಿಂಗ್ ಹೆಚ್ಚುತ್ತಲೇ ಇದೆ.

"ಮುಂಬೈ ನಗರದ ವಾಹನ ಸಂಖ್ಯೆ ಕಳೆದ ಎರಡು ವರ್ಷಗಳಿಂದ ಗಣನೀಯವಾಗಿ ಹೆಚ್ಚಿದ್ದು, ಕಾರು ಖರೀದಿ ಅಥವಾ ಖಾಸಗಿ ಕಾರುಗಳ ಸಂಚಾರವನ್ನು ನಗರದಲ್ಲಿ ಸೂಕ್ತವಾಗಿ ನಿಯಂತ್ರಿಸದಿದ್ದಲ್ಲಿ, ಸಮುದಾಯಕ್ಕೆ ರಸ್ತೆಗಳು ಮರೀಚಿಕೆಯಾಗಲಿವೆ" ಎಂದು ಸಂಚಾರ ತಜ್ಞ ಅಶೋಕ್ ದಾತಾರ್ ಎಚ್ಚರಿಸಿದ್ದಾರೆ. ನಗರದಲ್ಲಿ ಹೆಚ್ಚು ಹೆಚ್ಚು ಬಸ್ ಪ್ರಯಾಣ ಜನಪ್ರಿಯಗೊಳಿಸಲು ಕ್ರಮ ಕೈಗೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.

2016ರ ಮಧ್ಯಭಾಗದಲ್ಲಿ ಮುಂಬೈನ ಕಾರುದಟ್ಟಣೆ ಕಿಲೋಮೀಟರ್‌ಗೆ 430 ಕಾರುಗಳಷ್ಟಿತ್ತು. ಇದೀಗ 510ಕ್ಕೆ ಹೆಚ್ಚಿದೆ ಎಂದು ಮಹಾರಾಷ್ಟ್ರ ಸಾರಿಗೆ ಸಚಿವಾಲಯದ ಅಂಕಿಅಂಶ ಹೇಳುತ್ತದೆ. ಮುಂಬೈನಲ್ಲಿ ಒಟ್ಟು ನೋಂದಾಯಿತ ಕಾರುಗಳ ಸಂಖ್ಯೆ 10.2 ಲಕ್ಷ ಆಗಿದೆ. ನಗರದಲ್ಲಿ ಒಟ್ಟು 36 ಲಕ್ಷ ವಾಹನಗಳು ನೋಂದಣಿಯಾಗಿದ್ದು, ಈ ಪೈಕಿ ಶೇಕಡ 28ರಷ್ಟು ಕಾರುಗಳು ಎಂದು ಮೂಲಗಳು ಹೇಳಿವೆ. ಮುಂಬೈ ರಸ್ತೆಗಳಲ್ಲಿ ಶೇಕಡ 49 ಭಾಗವನ್ನು ಖಾಸಗಿ ಕಾರುಗಳು ಆಕ್ರಮಿಸಿಕೊಳ್ಳುತ್ತವೆ ಎಂದು ಮುಂಬೈ ಪರಿಸರ ಸಾಮಾಜಿಕ ಜಾಲ ಎಂಬ ಸಂಘಟನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News