ಚೌಕೀದಾರರಾಗಿರುವ ಬಿಜೆಪಿ ನಾಯಕರು ನೇಪಾಳದಲ್ಲಿ ಸ್ಪರ್ಧಿಸಿದರೆ ಗೆಲ್ಲಬಹುದು

Update: 2019-03-25 11:47 GMT

ಹೊಸದಿಲ್ಲಿ, ಮಾ.25: “ಬಿಜೆಪಿ ನಾಯಕರು ನೇಪಾಳದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು, ಅಲ್ಲಿ ಚೌಕೀದಾರರು ಗೆಲುವು ಸಾಧಿಸುತ್ತಾರೆ” ಎಂದು ಎನ್‍ಸಿಪಿಯ ರಾಜ್ಯಸಭಾ ಸದಸ್ಯ ಮಜೀದ್ ಮೆಮನ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಪಾಕಿಸ್ತಾನದಲ್ಲಿ ಚುನಾವಣೆ ಗೆಲ್ಲಬಹುದು ಎಂದು ಬಿಜೆಪಿ ಹೇಳಿದ ಬೆನ್ನಿಗೇ ಮೆಮನ್ ಅವರ ಈ ಹೇಳಿಕೆ ಬಂದಿದೆ.

“ಕಾಂಗ್ರೆಸ್ ಪಕ್ಷ ಪ್ರಾಯಶಃ ಪಾಕಿಸ್ತಾನದಲ್ಲಿ ಚುನಾವಣೆ ಸ್ಪರ್ಧಿಸಿದರೆ ಗೆಲ್ಲಬಹುದು ಎಂದು ರಾಮ್ ಮಾಧವ್ ಹೇಳುತ್ತಾರಾದರೆ ನಾನು ಅವರಿಗೆ ಒಂದು ಸಲಹೆ ನೀಡಬಯಸುತ್ತೇನೆ. ಎಲ್ಲಾ ಬಿಜೆಪಿ ನಾಯಕರು `ಚೌಕೀದಾರರು' ಆಗಿರುವುದರಿಂದ ಅವರೆಲ್ಲರೂ ನೇಪಾಳದಲ್ಲಿ ಚುನಾವಣೆಗೆ ನಿಂತರೆ ಅವರು ಗೆಲ್ಲುತ್ತಾರೆ'' ಎಂದು ಮೆಮನ್ ಹೇಳಿದರು. ಮೆಮನ್ ಅವರ ಪಕ್ಷ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಹೊಂದಿದೆ.

“ವಿಪಕ್ಷ ಕಾಂಗ್ರೆಸ್ ನಾಯಕರ ಟ್ವೀಟ್ ಗಳು ಭಾರತಕ್ಕಿಂತ ಪಾಕಿಸ್ತಾನದಲ್ಲಿ ಹೆಚ್ಚು ರಿಟ್ವೀಟ್ ಪಡೆಯುತ್ತವೆ, ಆ ಪಕ್ಷದ ನಾಯಕರು ಪಾಕಿಸ್ತಾನದಲ್ಲಿ ಚುನಾವಣೆಗೆ ನಿಂತರೆ ಗೆಲ್ಲಬಹುದು'' ಎಂದು ರವಿವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ರವಿವಾರ ಹೇಳಿದ್ದರು. “ವಿಪಕ್ಷಗಳು ಪಾಕಿಸ್ತಾನಕ್ಕಾಗಿ ಹೋರಾಡುತ್ತಿವೆಯೇ ಇಲ್ಲ, ಭಾರತಕ್ಕಾಗಿ ಹೋರಾಡುತ್ತಿವೆಯೇ ಎಂದು ತಿಳಿಯುತ್ತಿಲ್ಲ” ಎಂದೂ ಅವರು ಹೇಳಿದ್ದರು.

ರಾಮ್ ಮಾಧವ್ ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆಂದು ಕಾಂಗ್ರೆಸ್  ಅವರ ಹೇಳಿಕೆಗಳಿಗೆ ತೀವ್ರ ಆಕ್ಷೇಪ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News