ಮಸೀದಿ ದಾಳಿಗಳ ಬಗ್ಗೆ ‘ರಾಯಲ್ ಕಮಿಶನ್’ ತನಿಖೆ: ನ್ಯೂಝಿಲ್ಯಾಂಡ್ ಪ್ರಧಾನಿ ಘೋಷಣೆ

Update: 2019-03-25 16:29 GMT

ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಮಾ. 25: ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್ ನಗರದ ಎರಡು ಮಸೀದಿಗಳ ಮೇಲೆ ಮಾರ್ಚ್ 15ರಂದು ನಡೆದ ದಾಳಿಗೆ ಮುನ್ನ ಸಂಭವಿಸಿದ ಘಟನೆಗಳ ಬಗ್ಗೆ ತನಿಖೆ ನಡೆಸಲು ‘ರಾಯಲ್ ಕಮಿಶನ್’ ರಚಿಸಿರುವುದಾಗಿ ಪ್ರಧಾನಿ ಜಸಿಂಡ ಆರ್ಡರ್ನ್ ಸೋಮವಾರ ಘೋಷಿಸಿದರು.

ನ್ಯೂಝಿಲ್ಯಾಂಡ್‌ನಲ್ಲಿ ‘ರಾಯಲ್ ಕಮಿಶನ್’ ಎನ್ನುವುದು ಶಕ್ತಿಶಾಲಿ ಸಾರ್ವಜನಿಕ ತನಿಖಾ ಮಾದರಿಯಾಗಿದೆ.

ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಗೆ ಬಂದಿದ್ದ ಜನರ ಮೇಲೆ ‘ಬಿಳಿಯರು ಶ್ರೇಷ್ಠರು’ ಎಂದು ಭಾವಿಸುವ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 50 ಮಂದಿ ಮೃತಪಟ್ಟಿದ್ದಾರೆ.

‘‘ಈ ಭಯೋತ್ಪಾದಕ ಕೃತ್ಯ ಹೇಗೆ ಸಂಭವಿಸಿತು ಎನ್ನುವುದರ ಮೂಲಕ್ಕೆ ಹೋಗಲು ಹಾಗೂ ಅದನ್ನು ತಡೆಯಲು ನಮ್ಮಲ್ಲಿ ಯಾವುದಾದರೂ ಅವಕಾಶಗಳಿದ್ದವೇ ಎಂಬುದನ್ನು ತಿಳಿಯಲು ಕೂಲಂಕಷ ತನಿಖೆಯಾಗುವುದು ಅಗತ್ಯವಾಗಿದೆ’’ ಎಂದು ರಾಜಧಾನಿ ವೆಲಿಂಗ್ಟನ್‌ನಲ್ಲಿರುವ ಸಂಸತ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಹೇಳಿದರು.

ಹಂತಕನು ನ್ಯೂಝಿಲ್ಯಾಂಡ್‌ನಲ್ಲಾಗಲಿ, ಆಸ್ಟ್ರೇಲಿಯದಲ್ಲಾಗಲಿ ಯಾವುದೇ ನಿಗಾ ಪಟ್ಟಿಯಲ್ಲಿ ಇರಲಿಲ್ಲ ಎಂದು ಅವರು ಹೇಳಿದರು.

ಭದ್ರತಾ ಸಂಸ್ಥೆಗಳು ತಮ್ಮ ಗಮನವನ್ನು ಸರಿಯಾದ ವಿಷಯಗಳತ್ತ ಹರಿಸಿದ್ದವೆ ಹಾಗೂ ದಾಳಿಯ ಕುರಿತ ಸುಳಿವುಗಳು ತಪ್ಪಿ ಹೋದವೇ ಎನ್ನುವುದು ತನಿಖೆಯ ಪ್ರಮುಖ ಉದ್ದೇಶವಾಗಿದೆ ಎಂದು ಜಸಿಂದ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News