ದಲಿತರಿಗೆ ಹಲ್ಲೆ ನಡೆಸಿದ ಬಗ್ಗೆ ಕೊಚ್ಚಿಕೊಂಡಿದ್ದ ಐಪಿಎಸ್ ಅಧಿಕಾರಿಗೆ ಉನ್ನತ ಹುದ್ದೆ!

Update: 2019-03-26 10:14 GMT

ಮುಂಬೈ, ಮಾ.26: ದಲಿತರನ್ನು ಥಳಿಸಿದ ಬಗ್ಗೆ ಕೊಚ್ಚಿಕೊಂಡು ವಿವಾದಕ್ಕೀಡಾಗಿದ್ದ ಐಪಿಎಸ್ ಅಧಿಕಾರಿ ಭಾಗ್ಯಶ್ರೀ ನವ್ಟಕೆ ಎಂಬಾಕೆಯನ್ನು ಘಟನೆ ನಡೆದು ಎರಡು ತಿಂಗಳೊಳಗೆ ಉನ್ನತ ಹುದ್ದೆಗೇರಿಸಿದ ಬೆಳವಣಿಗೆ ಹಲವರ ಹುಬ್ಬೇರಿಸಿದೆ.

ಘಟನೆ ನಡೆದಾಗ ಬೀಡ್ ಜಿಲ್ಲೆಯ ಮಜಲಗಾಂವ್ ಉಪ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಭಾಗ್ಯಶ್ರೀಯನ್ನು ಘಟನೆ ನಡೆದ ಬೆನ್ನಲ್ಲೇ ಔರಂಗಾಬಾದ್ ಗುಪ್ತಚರ ಇಲಾಖೆಗೆ ವರ್ಗಾಯಿಸಲಾಗಿತ್ತು. ಇದು ಆಕೆ ಈ ಹಿಂದೆ ಇದ್ದ ಹುದ್ದೆಗಿಂತ ಕೆಳಗಿನ ಶ್ರೇಣಿಯ ಹುದ್ದೆ ಎಂದು ತಿಳಿಯಲಾಗಿತ್ತು. ಆದರೆ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಂತೆಯೇ ಕಳೆದ ತಿಂಗಳು ಭಾಗ್ಯಶ್ರೀಯನ್ನು ಸಿಂಧುದುರ್ಗ್ ಜಿಲ್ಲೆಯ ಕಂಕಾವಳಿ ಉಪ ವಿಭಾಗದ ಎಸ್‍ಡಿಪಿಒ (ಸಬ್-ಡಿವಿನಷಲ್ ಪೊಲೀಸ್ ಆಫೀಸರ್) ಆಗಿ ನೇಮಿಸಲಾಗಿದೆ.

ವಿವಾದಾತ್ಮಕ ವೀಡಿಯೋ ಕಳೆದ ವರ್ಷದ ಡಿಸೆಂಬರ್ 4ರಂದು ಹೊರಬಿದ್ದಿದ್ದು, ಅದರಲ್ಲಿ ಭಾಗ್ಯಶ್ರೀ ಎಂದು ತಿಳಿಯಲಾದ ಹಾಗೂ ಕಪ್ಪು ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಧರಿಸಿದ್ದ ಮಹಿಳೆ ಸುತ್ತಲೂ ಮರಾಠಾ ವ್ಯಕ್ತಿಗಳಿರುವಂತೆಯೇ ಕುರ್ಚಿಯಲ್ಲಿ ಕುಳಿತಿರುವುದು ಕಾಣಿಸುತ್ತದೆಯಲ್ಲದೆ. ಬಂಧಿತ ಮರಾಠ ವ್ಯಕ್ತಿಯೊಬ್ಬನನ್ನುದ್ದೇಶಿಸಿ, “ನಿನಗೆ ಎಷ್ಟು ಬಾರಿ ಥಳಿಸಲಾಗಿದೆ? ನಿನಗೆ ಕೇವಲ ಎರಡು ಮೂರು ಬಾರಿ ಬೆನ್ನಿಗೆ ಹೊಡೆಯಲಾಗಿದೆ. ನಾವು ದಲಿತರಿಗೆ ಹೇಗೆ ಥಳಿಸುತ್ತೇವೆ ಎಂದು ನೀನು ನೋಡಿಲ್ಲ. ನಾವು ಅವರ ಕೈಕಾಲುಗಳನ್ನು ಕಟ್ಟಿ ಥಳಿಸುತ್ತೇವೆ'' ಎನ್ನುವುದು ಐದು ನಿಮಿಷ ಅವಧಿಯ ವೀಡಿಯೋದಲ್ಲಿ ಕೇಳಿಸುತ್ತದೆ.

ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ವಯ ದೂರು ದಾಖಲಿಸಿದ 21 ದಲಿತರಿಗೆ ತಾನು ಥಳಿಸಿದ್ದಾಗಿ ಹಾಗೂ ಮುಸ್ಲಿಮರ ವಿರುದ್ಧ ಐಪಿಸಿ ಸೆಕ್ಷನ್ 307 ಅನ್ವಯ ಅವರಿಗೆ ಸುಲಭವಾಗಿ ಜಾಮೀನು ದೊರೆಯದಂತೆ ಮಾಡಲು, ಪ್ರಕರಣ ದಾಖಲಿಸಿದ್ದಾಗಿಯೂ ಅಧಿಕಾರಿಣಿ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.

ಈ ವಿವಾದಾತ್ಮಕ ವೀಡಿಯೋ ಬಗ್ಗೆ ತನಿಖೆ ನಡೆಸುತ್ತಿರುವ ನಾಸಿಕ್ ವಲಯದ ಐಜಿ ಚೆರ್ರಿಂಗ್ ಡೊರ್ಜೆ ಹಾಗೂ ವಿವಾದಿತ ಐಪಿಎಸ್ ಅಧಿಕಾರಿ ಭಾಗ್ಯಶ್ರೀ ಈ ಹೊಸ ಬೆಳವಣಿಗೆಯ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News