ನ್ಯೂಡ್ ವಿತ್ ಮಂಗಳಸೂತ್ರ: ಚಿತ್ರಕಲಾ ಪ್ರದರ್ಶನಕ್ಕೆ ವಿರೋಧ

Update: 2019-03-27 12:48 GMT

ಬೆಂಗಳೂರು, ಮಾ.27: ನ್ಯೂಡ್ ವಿತ್ ಮಂಗಳಸೂತ್ರ ಎಂಬ ಶೀರ್ಷಿಕೆ ಅಡಿ ತಯಾರಿಸಲಾಗಿರುವ ಚಿತ್ರಕಲೆಗಳ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರಕಲಾ ಪ್ರದರ್ಶನ ಮುಂದೂಡಲಾಗಿದೆ ಎಂದು ಚಿತ್ರಕಲಾವಿದ ಸುಜೀತ್‌ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ತಯಾರಿಸಿರುವ ಚಿತ್ರಕಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಕೆಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ಚಿತ್ರಗಳ ಪ್ರದರ್ಶನಕ್ಕೆ ಗ್ಯಾಲರಿಯಲ್ಲೂ ಅವಕಾಶ ನೀಡಿಲ್ಲ. ಆದ್ದರಿಂದ ಈ ಪ್ರದರ್ಶನವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಅವರು ತಿಳಿಸಿದರು.

ನಾನು ಒಂದು ವಿಷಯದ ಮೇಲೆ ಅನೇಕ ಕಲಾಕೃತಿಗಳನ್ನು ರಚಿಸಿದ್ದೇನೆ. ಪರಿಸರ, ಸ್ವಚ್ಛತೆ, ಸಂಚಾರ ದಟ್ಟಣೆ ಮುಂತಾದ ವಿಷಯಾಧಾರಿತ ಚಿತ್ರಕಲೆಗಳಿಂದ ಸಾಕಷ್ಟು ಜನ ಮನ್ನಣೆ ದೊರೆತಿದೆ. ಭಾರತೀಯ ಸಂಸ್ಕೃತಿಗೆ ಧಕ್ಕೆ ತರುವ ಚಿತ್ರಗಳನ್ನು ರಚಿಸಿಲ್ಲ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನನಗೆ ಅಪಾರ ಗೌರವ ಸಂದಿದೆ. ಇದೀಗ ರಚಿಸಿರುವ ಚಿತ್ರಕಲೆಗಳು ಹೆಣ್ಣು ಮತ್ತು ಪ್ರಕೃತಿ ನಡುವಿನ ಸಂಬಂಧವಾಗಿದೆ. ಅನೇಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಐದಾರು ವರ್ಷಗಳಿಂದ 500ಕ್ಕಿಂತ ಹೆಚ್ಚು ಕಲಾಕೃತಿಗಳನ್ನು ತಯಾರಿಸಿದ್ದೇನೆ. ನನ್ನ ಕಲಾಕೃತಿಗಳನ್ನು ಕಲೆಯ ದೃಷ್ಟಿಕೋನದಿಂದ ಗ್ರಹಿಸಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News