ರಾಜ್ಯದಲ್ಲಿ 39,539 ಸೇವಾ ಮತದಾರರ ನೋಂದಣಿ: ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್

Update: 2019-03-27 12:51 GMT

ಬೆಂಗಳೂರು, ಮಾ.27: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 39,539 ಸೇವಾ ಮತದಾರರು ನೋಂದಣಿಯಾಗಿದ್ದು, ಅವರೆಲ್ಲರೂ ತಪ್ಪದೆ ಮತದಾನ ಮಾಡುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದರು.

ನಗರದ ವಾರ್ತಾ ಸೌಧದಲ್ಲಿ ಆಯೋಜಿಸಿದ್ದ ಸೇವಾ ಮತದಾರರೊಂದಿಗೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಭಾರತೀಯ ಸೈನದಲ್ಲಿರುವ ಭೂ, ವಾಯು ಹಾಗೂ ನೌಕಾದಳದ ಸಿಬ್ಬಂದಿಗಳು, ಸಿಆರ್‌ಪಿಎಫ್ ಸಿಬ್ಬಂದಿಗಳು ಹಾಗೂ ವಿದೇಶಾಂಗ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇವಾ ಮತದಾರರ ವ್ಯಾಪ್ತಿಯಲ್ಲಿ ಬರಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಶಸ್ತ್ರ ಪಡೆಯಲ್ಲಿರುವ ರಾಜ್ಯದ ಸದಸ್ಯರು ಅರ್ಜಿ ನಮೂನೆ 2ರ ಮೂಲಕ ನೋಂದಾಯಿಸಿಕೊಳ್ಳಬೇಕು. ಹಾಗೂ ಭಾರತದ ಹೊರ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರಕಾರಿ ನೌಕರರು ಅರ್ಜಿ ನಮೂನೆ 3ರ ಮೂಲಕ ಮತ ಚಲಾವಣೆಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.

ಸೇವಾ ಮತದಾರರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡವರಿಗೆ ತಮ್ಮ ಹತ್ತಿರದ ಯಾವುದೆ ಮತಗಟ್ಟೆಯಲ್ಲಿ ತಮ್ಮ ತವರು ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಲು ಅವಕಾಶವಿದೆ. ಮತದಾನಕ್ಕೆ ಅರ್ಹತೆ ಇರುವ ಯಾವೊಬ್ಬ ಮತದಾರರು ಮತದಾನದಿಂದ ಹೊರಗುಳಿಯಬಾರದು ಎಂಬ ಸದುದ್ದೇಶದಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಸೇವಾ ನಿರತ ಮತದಾರರ ಮತದಾನದ ಪ್ರಮಾಣ ಅತ್ಯಂತ ಕಡಿಮೆ ಇದೆ. 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ 36,226ಮಂದಿ ಹಾಗೂ 2014ರ ಲೋಕಸಭೆ ಚುನಾವಣೆಯಲ್ಲಿ 40,729 ನೋಂದಾಯಿತರಾಗಿದ್ದು, ಹೆಚ್ಚಿನವರು ಮತದಾನ ಮಾಡಿರಲಿಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ 28,622 ಮತದಾರರು ನೋಂದಣಿಯಾಗಿದ್ದರು. ಆದರೆ, ಮತದಾನ ಮಾಡಿದ್ದು ಕೇವಲ ಶೇ.10.7ರಷ್ಟು ಮಂದಿ ಮಾತ್ರ ಎಂದು ಅವರು ವಿಷಾದಿಸಿದರು.

ದೇಶದ ಸೈನ್ಯದಲ್ಲಿ ಕೆಲಸ ಮಾಡುತ್ತಿರುವ ಸೇವಾನಿರತ ಸಿಬ್ಬಂದಿಗಳು ತಮ್ಮ ತಂದೆ, ತಾಯಿ, ಪತ್ನಿ ಅಥವಾ ಆಪ್ತರ ಹೆಸರಿಗೆ ಪ್ರಾಕ್ಸಿ ಮತದಾನದ ಹಕ್ಕು ಸ್ವಾಮ್ಯತೆಯ ಪತ್ರವನ್ನು ಕಳುಹಿಸಬೇಕು. ಆ ಪತ್ರವನ್ನು ಆಧರಿಸಿ ಮತದಾನ ಮಾಡುವವರು ತಮ್ಮ ಗುರುತಿನ ನೋಟರಿ ಮಾಡಿಸಬೇಕು. ನಂತರ ಮತಗಟ್ಟೆಯಲ್ಲಿ ನೇರವಾಗಿ ಮತ ಚಲಾಯಿಸಬಹುದು.

-ಸಂಜೀವ್‌ ಕುಮಾರ್, ಮುಖ್ಯ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News