ನೀತಿ ಸಂಹಿತೆ ಉಲ್ಲಂಘನೆ: ನಗದು ಸೇರಿ 27.38 ಕೋಟಿ ರೂ. ಮೌಲ್ಯದ ಮದ್ಯ, ಮಾದಕ ದ್ರವ್ಯ ವಶ
ಬೆಂಗಳೂರು, ಮಾ.27: ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿರುವ ಆರೋಪದಡಿ ಇದುವರೆಗೂ 27.38 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ದ್ರವ್ಯ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದರು.
ನಗರದ ವಾರ್ತಾಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ 1512 ಫ್ಲೈಯಿಂಗ್ ಸ್ಕ್ವಾಡ್ಸ್, 1837 ಸ್ಟಾಟಿಕ್ ಸರ್ವೆಲೆನ್ಸ್ ತಂಡ, 320 ಅಬಕಾರಿ ತಂಡ ಹಾಗೂ 180 ವಾಣಿಜ್ಯ ತೆರಿಗೆ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಫ್ಲೈಯಿಂಗ್ ಸ್ಕ್ವಾಡ್ಸ್‌ಗಳು, ಸ್ಟಾಟಿಕ್ ಸರ್ವೆಲೆನ್ಸ್ ಹಾಗೂ ಪೊಲೀಸ್ ಪ್ರಾಧಿಕಾರಿಗಳು ಇದುವರೆಗೂ 4.47 ಕೋಟಿ ರೂ.ನಗದು, 24.25 ಲಕ್ಷ ರೂ.ಮೌಲ್ಯದ ಮದ್ಯ, 129.19 ಕೆಜಿ ಮಾದಕ ದ್ರವ್ಯ ಹಾಗೂ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿದೆ. ಹಾಗೂ 264 ಪ್ರಥಮ ಮಾಹಿತಿ ವರದಿ(ಎಫ್‌ಐಆರ್) ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಅಬಕಾರಿ ಇಲಾಖೆಯು 20.21 ಕೋಟಿ ರೂ.ಮೌಲ್ಯದ ಮದ್ಯ, 4.05 ಲಕ್ಷ ರೂ.ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಂಡು 1332 ಗಂಭೀರ ಪ್ರಕರಣಗಳನ್ನು ದಾಖಲಿಸಿದೆ. ಒಟ್ಟಾರೆ 95081 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಕೊಳ್ಳಲಾಗಿದೆ. 7 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 6 ಶಸ್ತ್ರಾಸ್ತ್ರ ಪರವಾನಿಗೆಯನ್ನು ರದ್ದು ಪಡಿಸಲಾಗಿದೆ, ಹಾಗೂ ಸಿಆರ್‌ಪಿಸಿ ಕಾಯ್ದೆಯಡಿ 42,351 ಪ್ರಕರಣಗಳನ್ನು ದಾಖಲಿಸಲಾಗಿದ್ದು, 37,422 ವ್ಯಕ್ತಿಗಳಿಂದ ಮುಚ್ಚಳಿಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.
ಸಿ ವಿಜಿಲ್ ಅಫ್ಲಿಕೇಶನ್ ಮೂಲಕ 878 ದೂರುಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ ಅನುಮತಿ ಇಲ್ಲದೆ ಪೋಸ್ಟರ್, ಬ್ಯಾನರ್(147), ಹಣ ಹಂಚಿಕೆ(94), ಕಾಸಿಗಾಗಿ ಸುದ್ದಿ(56), ಉಡುಗೊರೆ, ಕೂಪನ್ ಹಂಚಿಕೆ(45), ಮದ್ಯ ಹಂಚಿಕೆ(44), ಅನುಮತಿ ರಹಿತ ವಾಹನ ಅಥವಾ ಬೆಂಗಾವಲು(29) ಇವುಗಳಲ್ಲಿ 165 ದೂರುಗಳು ನಿಜವೆಂದು ಕಂಡುಬಂದಿದ್ದು ಸೂಕ್ತ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.