ಚುನಾವಣೆ ಎದುರಿಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಚಿಕ್ಕಮಗಳೂರು ಡಿಸಿ ಡಾ.ಗೌತಮ್

Update: 2019-03-27 13:11 GMT

ಚಿಕ್ಕಮಗಳೂರು, ಮಾ.27: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಎ.18ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದರು.

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.26ರ ಮಧ್ಯಾಹ್ನ 3ಗಂಟೆಗೆ ನಾಮಪತ್ರ ಸ್ವೀಕೃತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಬುಧವಾರ ನಾಮಪತ್ರ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ. ಮಾ.29 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದ ಅವರು, ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳಿಂದ ಒಟ್ಟು 26 ನಾಮಪತ್ರಗಳು ಸ್ವೀಕೃತಗೊಂಡಿವೆ. ಅದೇ ರೀತಿ ಹಾಸನ ಕ್ಷೇತ್ರದಿಂದ 11 ಅಭ್ಯರ್ಥಿಗಳಿಂದ ಹಾಸನ ಕ್ಷೇತ್ರದಿಂದ 18 ನಾಮಪತ್ರಗಳು ಸ್ವೀಕೃತಗೊಂಡಿವೆ ಎಂದರು.

ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಮಾಡುವ ಖರ್ಚಿನ ಮೇಲೆ ನಿಗಾ ವಹಿಸಲು ಜಿಲ್ಲಾ ಮಟ್ಟದ ಖರ್ಚುವೆಚ್ಚ ನಿಗಾ ತಂಡ ಹಾಗೂ ವಿಧನಸಭಾ ವ್ಯಾಪ್ತಿಯಲ್ಲಿ ಎಕ್ಸ್ಪೆಂಡಿಚರ್ ಅಬ್ಸರ್ವರ್ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 

ಚುನಾವಣೆ ಪರಿವೀಕ್ಷಣೆಗೆ ಚುನಾವಣಾ ಆಯೋಗ ವೀಕ್ಷಕರನ್ನು ನೇಮಿಸಿದೆ. ಚಿಕ್ಕಮಗಳೂರು ಉಡುಪಿ ಕ್ಷೇತ್ರಕ್ಕೆ ಐಆರ್‍ಎಸ್ ಅಧಿಕಾರಿ ಮಲ್ಲಿಕಾರ್ಜುನ್ ಉತ್ತುರೆ, ಐಎಎಸ್ ಅಧಿಕಾರಿ ಕೃಷ್ಣ ಕುನಾಲ್, ಐಪಿಎಸ್ ಅಧಿಕಾರಿ ಸಂದೀಪ್ ಪ್ರಕಾಶ್ ಕಾರ್ಣಿಕ್ ಅವರನ್ನು ನೇಮಿಸಿದೆ. ಅದೇ ರೀತಿ ಹಾಸನ ಕ್ಷೇತ್ರಕ್ಕೆ ಐಆರ್‍ಎಸ್ ಅಧಿಕಾರಿ ರಾಜೀವ್ ಮಗೋ, ಐಎಎಸ್ ಅಧಿಕಾರಿ ಮಂಜಿತ ಸಿಂಗ್ ಹಾಗೂ ಐಪಿಎಸ್ ಅಧಿಕಾರಿ ಲಕ್ಷ್ಮೀಕಾಂತ್ ಯಾದವ್ ಅವರನ್ನು ನೇಮಿಸಲಾಗಿದೆ ಎಂದರು.

ಜಿಲ್ಲಾದ್ಯಾಂತ ಪೋಸ್ಟರ್ ಹಾಗೂ ಬ್ಯಾನರ್ ಗಳನ್ನು ಹಾಗೂ ಗೋಡೆ ಬರಹಗಳನ್ನು ತೆರವುಗೊಳಿಸಲು ಜಿಲ್ಲಾಮಟ್ಟದ ತಂಡ ರಚಿಸಿ ತೆರವುಗೊಳಿಸಲಾಗಿದೆ. ತಂಡವು ಮಾ.13ರೊಳಗೆ ಸಾರ್ವಜನಿಕರ ಕಟ್ಟಡದ 2847 ಹಾಗೂ ಖಾಸಗಿ ಕಟ್ಟಡದ 1326 ಗೋಡೆ ಬರಹ, ಬ್ಯಾನರ್ ಹಾಗೂ ಪೋಸ್ಟರ್ ಗಳನ್ನು ತೆರವುಗೊಳಿಸಲಿದೆ ಎಂದರು.

ನೀತಿ ಸಂಹಿತೆ ಜಾರಿಯಲ್ಲಿದ್ದು, ಸಮರ್ಪಕ ದಾಖಲೆಗಳಿಲ್ಲದೆ 50 ಸಾವಿರಕ್ಕೂ ಮೀರಿದ ಹಣವನ್ನು ಕೊಂಡೊಯ್ಯುವಂತಿಲ್ಲ, 50 ಸಾವಿರಕ್ಕೂ ಹೆಚ್ಚಿನ ಹಣ ಕೊಂಡೊಯ್ಯುವಾಗ ಸಮರ್ಪಕ ದಾಖಲೆ ನೀಡುವಂತೆ ಸೂಚಿಸಲಾಗಿದೆ. ಬ್ಯಾಂಕ್ ಅಧಿಕಾರಿಗಳೊಂದಿಗೂ ಈಗಾಗಲೇ ಸಭೆ ನಡೆಸಲಾಗಿದೆ. ಒಂದು ಬ್ಯಾಂಕ್ ಖಾತೆಯಿಂದ ಸುಮಾರು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾದರೆ ಮಾಹಿತಿ ನೀಡಬೇಕು. ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ವರ್ಗಾವಣೆಯಾದರೆ ವರದಿ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಲಾಗಿದೆ ಹಾಗೂ 10 ಲಕ್ಷಕ್ಕೂ ಹೆಚ್ಚು ಹಣ ವ್ಯವಹಾರ ನಡೆಸುವವರ ಬಗ್ಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಆದಾಯ ತೆರಿಗೆಯ ವೀಕ್ಷಕರನ್ನಾಗಿ ಅಭಿನವಪಿಟ್ಟ ಎಂಬುವರನ್ನು ನೇಮಿಸಲಾಗಿದೆ ಎಂದರು.

ಮತದಾನ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ನಮೂನೆ 12 ಮತ್ತು 12ಎ ಯನ್ನು ಈಗಾಗಲೇ ನೀಡಲಾಗಿದೆ. ಜೊತೆಗೆ ಅವರಿಗೆ ನೀಡುವ ಗೌರವಧನವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲು ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಐಎಫ್‍ಎಸ್‍ಸಿ ಕೋಡ್ ಸೇರಿದಂತೆ ವಿವರಗಳನ್ನು ಪಡೆಯಲಾಗುತ್ತಿದೆ. ಒಟ್ಟು 484 ಸೇವಾ ಮತದಾರರಿದ್ದು, ಅವರುಗಳಿಗೆ ಇಟಿಪಿಬಿಎಸ್ ಮೂಲಕ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಮತದಾನಕ್ಕೆ ಒಟ್ಟು 309 ಮಾರ್ಗಗಳಲ್ಲಿ 341 ವಾಹನಗಳನ್ನು ವಿವಿಧ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇವಿಎಂ ಮತ್ತು ವಿವಿಪ್ಯಾಟ್ ಹಾಗೂ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳ ರ್ಯಾಂಡಮೈಜೇಶನ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಬಾರಿ 13357 ಮಂದಿ ಪ್ರಪ್ರಥಮ ಬಾರಿಗೆ ಮತ ಚಲಾಯಿಸುತ್ತಿದ್ದಾರೆ ಎಂದರು.

ಚುನಾವಣಾ ಸಮಯದಲ್ಲಿ ಶಸ್ತ್ರಾಸ್ತ್ರಗಳನ್ನು ಆಯಾ ಠಾಣಾ ವ್ಯಾಪ್ತಿಯಲ್ಲಿ ಠೇವಣಿ ಇಡಬೇಕಾಗಿದ್ದು, ಅಧಿಕೃತವಾಗಿ ಶಸ್ತ್ರಾಸ್ತ್ರ ಹೊಂದಿರುವ 9144 ಮಂದಿಯಲ್ಲಿ 8858 ಮಂದಿ ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಿದ್ದಾರೆ. ಬ್ಯಾಂಕ್, ಆಭರಣದ ವ್ಯಾಪಾರಿಗಳು, ಮಲೆನಾಡಿನ ಮೂಲೆಯಲ್ಲಿ ಒಂಟಿಮನೆಯಲ್ಲಿ ವಾಸವಾಗಿರುವವರು, ರೈಫಲ್ ಕ್ಲಬ್ ಸದಸ್ಯರು ಸೇರಿದಂತೆ 233 ಶಸ್ತ್ರಾಸ್ತ್ರಗಳನ್ನು ಇರಿಸಿಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರದಿ ಆಧಾರಿಸಿ ಅವಕಾಶ ಕಲ್ಪಿಸಲಾಗಿದೆ. ಇನ್ನೂ 53 ಶಸ್ತ್ರಾಸ್ತ್ರ ಠೇವಣಿ ಇಡುವುದು ಬಾಕಿ ಇದ್ದು ಸದ್ಯದಲ್ಲೇ ಠಾಣಾ ವ್ಯಾಪ್ತಿಗೆ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ 53.63 ಲಕ್ಷ ರೂ. ಮೌಲ್ಯದ 13,993 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. 1.49 ಲಕ್ಷ ರೂ ನಷ್ಟು ನಗದು ವಶಪಡಿಸಿಕೊಳ್ಳಲಾಗಿದೆ. ಎಸ್.ಎಸ್.ಟಿ ತಂಡದಿಂದ 2.48 ಲಕ್ಷ ರೂ. ಮೌಲ್ಯದ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇವಿಎಂ ಮತ್ತು ವಿವಿ ಪ್ಯಾಟ್ ಪ್ರಾತ್ಯಕ್ಷಿಕೆಯನ್ನು ಜಿಲ್ಲೆಯ ಎಲ್ಲ ಕಡೆ ನಡೆಸಲು 83 ತಂಡಗಳು ಕೆಲಸ ಮಾಡುತ್ತಿವೆ. ರಾಜಕೀಯ ಪಕ್ಷಗಳಿಗೆ ಪ್ರತೀ ವಿಧಾನ ಸಭಾ ಕ್ಷೇತ್ರದಲ್ಲಿ ಇವಿಎಂ ಮತ್ತು ವಿವಿಪ್ಯಾಟ್‍ಗಳ ಬಾರ್‍ಕೋಡ್ ಸಮೇತ ಪೂರ್ಣ ವಿವರ ನೀಡಲಾಗಿದೆ. ಜಿಲ್ಲೆಯಲ್ಲಿ ಚುನಾವಣೆ ಕಾರ್ಯಕ್ಕೆ ನಿಯೋಜಿಸಿಕೊಂಡಿರುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಇನ್ನಷ್ಟು ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಒಟ್ಟು 130 ವಾಹನಗಳಿಗೆ ಜಿಪಿಎಸ್ ಆಳವಡಿಸಲಾಗಿದೆ. ಮತದಾರರ ಮಾಹಿತಿ ಕೇಂದ್ರ ತೆರೆಯಲಾಗಿದೆ. ಕೇಂದ್ರವೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಮತದಾನ ಮಾಹಿತಿ ಕೇಂದ್ರದ ಸಲಹೆ ಪಡೆಯಲು ಜಿಲ್ಲೆಯ ಒಳಗಿನ ಮತದಾರರು 1950 ಹಾಗೂ ಜಿಲ್ಲೆಯ ಹೊರಗಿರುವ ಮತದಾರರು 08262-1950ಗೆ ಕರೆ ಮಾಡಿ ದೂರು ಅಥವಾ ಸಲಹೆ ಪಡೆಯಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು. 

ಯಾವುದೇ ಅಡೆತಡೆಗಳಲ್ಲದೆ ಸುಸೂತ್ರವಾಗಿ ಮತದಾನ ನಡೆಯಲು ಜಿಲ್ಲೆಯಲ್ಲಿ 1222 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮತದಾನದ ದಿನದಂದು ಜಿಲ್ಲೆಯಾದ್ಯಂತ 9,26,035 ಮಂದಿ ಮತ ಚಲಾಯಿಸಲಿದ್ದಾರೆ. ಇದಕ್ಕೆ ಬೇಕಾಗುವ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾನಕ್ಕೆ 6110 ಮಂದಿ ಅಧಿಕಾರಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ಶೇ.25ರಷ್ಟು ಅಧಿಕಾರಿ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ತುರ್ತು ಸಂದರ್ಭಗಳಲ್ಲಿ ಬಳಸಲು ಇಟ್ಟುಕೊಳ್ಳಲಾಗಿದೆ. ಪ್ರತೀ ಮತಗಟ್ಟೆಯಲ್ಲಿ 4 ಮಂದಿ ಅಧಿಕಾರಿ, ಸಿಬ್ಬಂದಿ ಇದ್ದು, ಎಲ್ಲರಿಗೂ ಸಹ ಆಯಾ ತಾಲೂಕು ಕೇಂದ್ರಗಳಲ್ಲಿ ಮಾ.30ರಂದು ತರಬೇತಿ ನೀಡಲಾಗುವುದು.
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News