ಕಳಸ: ಮನೆಯಲ್ಲಿ ಸ್ಫೋಟಕ ಪತ್ತೆ ಪ್ರಕರಣ; ಆರೋಪಿಗೆ ಜಾಮೀನು

Update: 2019-03-27 14:03 GMT

ಚಿಕ್ಕಮಗಳೂರು, ಮಾ.27: ಮನೆಯ ಟೆರೇಸ್ ಮೇಲೆ ಸ್ಫೋಟಕ ವಸ್ತುಗಳ ಪತ್ತೆಯಾದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ಕಳಸ ಪಟ್ಟಣದ ವ್ಯಾಪಾರಿಗೆ ಬುಧವಾರ ಮೂಡಿಗೆರೆ ತಾಲೂಕು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದ ವ್ಯಾಪಾರಿಯೊಬ್ಬರ ಮನೆಯಲ್ಲಿ ಸ್ಫೋಟಕಗಳನ್ನು ಅಡಗಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಳಸ ಪಟ್ಟಣದ ಪೊಲೀಸರು ವ್ಯಾಪಾರಿ ಮನೆಯಲ್ಲಿ ಶೋಧ ನಡೆಸಿ ಮನೆಯ ಟೆರೇಸ್‍ನಲ್ಲಿ ಕಲ್ಲು ಕ್ವಾರಿಯಲ್ಲಿ ಬಂಡೆಗಳ ಸ್ಫೋಟ ಮಾಡಲು ಬಳಸುವ 14 ಜಿಲೆಟಿನ್ ಕಡ್ಡಿಗಳು ಹಾಗೂ 40 ಡಿನೋಟರ್ ಗಳನ್ನು ವಶಕ್ಕೆ ಪಡೆದು, ಮನೆ ಮಾಲಕ ಹಾಗೂ ವ್ಯಾಪಾರಿ ವಿರುದ್ಧ ಪ್ರಕರಣದ ದಾಖಲಿಸಿಕೊಂಡು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ವ್ಯಾಪಾರಿಯ ಬಂಧನವಾಗುತ್ತಲೇ ಕೆಲ ದೃಶ್ಯ ಮಾಧ್ಯಮಗಳು ಬಂಧಿತ ಆರೋಪಿಯು ನಕ್ಸಲರೊಂದಿಗೆ, ಉಗ್ರಗಾಮಿಗಳೊಂದಿಗೆ ನಂಟು ಹೊಂದಿದ್ದ, ಚುನಾವಣೆ ಸಂದರ್ಭ ವಿಧ್ವಂಸಕ ಕೃತ್ಯ ನಡೆಸಲು ಸಂಚು ಮಾಡಿದ್ದ ಎಂದು ಊಹಾಪೋಹಗಳ ಸುದ್ದಿ ಬಿತ್ತಿರಿಸಿದ್ದವು. ಈ ಬಂಧನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಗಳವಾರ ಸಂಜೆ ವೇಳೆಗೆ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿ, ಆರೋಪಿಯು ಯಾವುದೇ ಹಿಂಸಾಕೃತ್ಯ ಎಸಗುವ ಗುಂಪಿನೊಂದಿಗೆ ನಂಟು ಹೊಂದಿಲ್ಲ. ಅಕ್ರಮವಾಗಿ ಸ್ಫೋಟಕಗಳನ್ನು ಹೊಂದಿದ್ದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದರಿಂದ ಊಹಾಪೋಹಗಳಿಗೆ ತೆರೆಬಿದ್ದಿತ್ತು. ಘಟನೆ ಸಂಬಂಧ ಆರೋಪಿ ಜಾಮೀನು ಕೋರಿ ಮಂಗಳವಾರವೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೆಂದು ತಿಳಿದು ಬಂದಿದ್ದು, ಬುಧವಾರ ಬೆಳಗ್ಗೆ ಮೂಡಿಗೆರೆ ತಾಲೂಕು ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.

ಜಾಮೀನು ಸಿಕ್ಕ ಬಳಿಕ ವಾರ್ತಾಭಾರತಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಬಂಧನಕ್ಕೊಳಗಾಗಿದ್ದ ವ್ಯಕ್ತಿ,  ತನ್ನ ಮನೆಯ ಟೆರೇಸ್ ಮೇಲೆ ಸಿಕ್ಕಿದ ಸ್ಫೋಟಕಗಳಿಗೂ ತನಗೂ ಯಾವುದೇ ಸಂಬಂಧ ಇಲ್ಲ, ಇಂತಹ ಸ್ಫೋಟಕಗಳನ್ನು ತಾನು ಮೊದಲ ಬಾರಿಗೆ ನೋಡುತ್ತಿದ್ದೇನೆ. ಸ್ಫೋಟಕಗಳು ನನ್ನ ಮನೆಯ ಮೇಲೆ ಹೇಗೆ ಬಂತು ಗೊತ್ತಿಲ್ಲ. ಕಳಸ ಪಟ್ಟಣದಲ್ಲಿ ತನ್ನ ಏಳಿಗೆ ಸಹಿಸದವರು ತುಂಬಾ ಜನರಿದ್ದಾರೆ. ಅವರಲ್ಲಿ ಯಾರಾದರೂ ತನ್ನ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಲು ಹೀಗೆ ಮಾಡಿದ್ದಾರೆ. ವೈಯಕ್ತಿಕ ದ್ವೇಷದಿಂದ ಸ್ಫೋಟಕಗಳನ್ನು ತಂದಿಡುತ್ತಾರೆಂದು ಕನಸಿನಲ್ಲೂ ಯೋಚಿಸಿರಲಿಲ್ಲ. ನನ್ನ ಮನೆಯಲ್ಲಿ ನನ್ನ ಕುಟುಂಬದವರು, ಪತ್ನಿ ಮಕ್ಕಳು ವಾಸ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಸ್ಫೋಟಕಗಳನ್ನು ನಾನೇ ತಂದಿಡಲು ಹೇಗೆ ಸಾಧ್ಯ. ಇದನ್ನು ಎಸ್ಪಿ ಅವರ ಗಮನಕ್ಕೆ ವಿಚಾರಣೆ ವೇಳೆ ತಿಳಿಸಿದ್ದೇನೆ. ಸ್ಫೋಟಕಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದವರನ್ನೇ ಸರಿಯಾಗಿ ವಿಚಾರಿಸಿದರೆ ಸಂಚು ಕೋರರು ಸಿಗುತ್ತಾರೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮಾಡಬೇಕು. ಪೊಲೀಸರು ತನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿಲ್ಲ. ಅವರ ಮೇಲೆ ವಿಶ್ವಾಸವಿದೆ. ನಾನು ಯಾವುದೇ ಹಿಂಸಾಕೃತ್ಯಗಳಲ್ಲಿ ಹಿಂದೆಯೂ ಭಾಗಿಯಾಗಿಲ್ಲ. ಮುಂದೆಯೂ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಕೆಲ ಸುದ್ದಿ ವಾಹಿನಿಗಳು ತನ್ನ ಮನೆಯಲ್ಲಿ ಸ್ಫೋಟಕಗಳು ಪತ್ತೆಯಾದ ಘಟನೆ ಬಗ್ಗೆ ಕೆಟ್ಟದಾಗಿ ವರದಿ ಮಾಡಿವೆ. ನನ್ನನ್ನು ಭಯೋತ್ಪಾದಕ ನೆಂದು ಬಿಂಬಸಲು ಪ್ರಯತ್ನಿಸಿವೆ. ಘಟನೆಯಲ್ಲಿ ಪೊಲೀಸರು ನನ್ನನ್ನು ಮಾತ್ರ ಬಂಧಿಸಿದ್ದಾರೆ. ಆದರೆ ಕೆಲ ಪತ್ರಿಕೆಗಳು ತನ್ನ ಸಹೋದರನನ್ನು ಬಂಧಿಸಿದ್ದಾರೆಂದು ವರದಿ ಮಾಡಿವೆ. ಸುಳ್ಳು ಸುದ್ದಿ ಪ್ರಕಟಿಸಿ ಮಾನಹಾನಿ ಮಾಡಿದ್ದ ಹಿನ್ನೆಲೆಯಲ್ಲಿ ಇಂತಹ ಸುದ್ದಿವಾಹಿನಿಗಳು ಹಾಗೂ ಪತ್ರಿಕೆಗಳ ವಿರುದ್ಧ ನ್ಯಾಯಾಲಯಲ್ಲಿ ಮಾನನಷ್ಟ ಪ್ರಕರಣ ದಾಖಲಿಸುತ್ತೇನೆ.
- ಸ್ಫೋಟಕಗಳು ಪತ್ತೆಯಾದ ಮನೆಯ ಮಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News