ಮುದ್ದಹನುಮೇಗೌಡ ನಾಮಪತ್ರ ವಾಪಸ್ ಪಡೆಯುವ ವಿಶ್ವಾಸವಿದೆ: ಡಿಸಿಎಂ ಪರಮೇಶ್ವರ್

Update: 2019-03-27 14:45 GMT

ತುಮಕೂರು,ಮಾ.27: ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಕೆ.ಎನ್.ರಾಜಣ್ಣ ಅವರು ನಾಮಪತ್ರ ಹಿಂದಕ್ಕೆ ಪಡೆಯದೇ ಇದ್ದರೆ ನಾವೇನು ಮಾಡುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು. 

ಚುನಾವಣಾ ತಂತ್ರ ಕುರಿತು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ಜಂಟಿ ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರು ಸ್ಪರ್ಧಿಸುತ್ತಿದ್ದಾರೆ. ಮುದ್ದಹನುಮೇಗೌಡ ಹಾಗೂ ರಾಜಣ್ಣ ಅವರಿಗೆ ನಮ್ಮ ದೂರದೃಷ್ಟಿ, ವಿಶಾಲ ದೃಷ್ಟಿಯ ಯೋಜನೆ ಮನವರಿಕೆ ಮಾಡಿಕೊಡುತ್ತೇವೆ. ಈಗಾಗಲೇ ಮುದ್ದಹನುಮೇಗೌಡರ ಜೊತೆ ಒಂದು ಸುತ್ತಿನ ಮಾತುಕತೆ ಆಗಿದೆ. ಸಜ್ಜನ ರಾಜಕಾರಣಿಯಾಗಿರುವ ಅವರು ನಾಮಪತ್ರ ವಾಪಸ್ ಪಡೆಯುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ದೇಶದಲ್ಲಿ ಶಾಂತಿ ನೆಲೆಸಲು ಬಯಸುತ್ತೇವೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು ಮುಖ್ಯ. ಇದಕ್ಕಾಗಿ ಜಾತ್ಯತೀತ ಶಕ್ತಿಗಳು ಪರಸ್ಪರ ಕೈಜೋಡಿಸಬೇಕಿದೆ. ಇದನ್ನು ಅವರು ಅರ್ಥ ಮಾಡಿಕೊಳ್ಳಲಿದ್ದಾರೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದರು.

ಸಚಿವ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವವರು ಮೊದಲು ನಾವು ಸರಿ ಇದ್ದೇವಾ ಎಂದು ನೋಡಿಕೊಳ್ಳಬೇಕು ಎಂದು ಹೇಳಿ, ಕೆ.ಎನ್.ರಾಜಣ್ಣರ ಪತ್ನಿ ಹಾಗೂ ಪುತ್ರ ಚುನಾವಣೆಗೆ ಸ್ಪರ್ಧಿಸಿದ್ದನ್ನು ನೆನೆಪಿಸಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಆರ್. ರಾಮಕೃಷ್ಣಪ್ಪ, ಮಾಜಿ ಶಾಸಕರಾದ ಡಾ. ರಫೀಕ್ ಆಹಮ್ಮದ್, ಮುರಳೀಧರ ಹಾಲಪ್ಪ, ಮಾಜಿ ಶಾಸಕರಾದ ಶಫಿ ಆಹಮ್ಮದ್, ಮಾಜಿ ಶಾಸಕರಾದ ಸುಧಾಕರ್ ಲಾಲ್, ಎಸ್.ಆರ್. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ರಮೇಶ್ ಬಾಬು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News