×
Ad

ಆಸ್ತಿ ಕಲಹ: ಚಿಕ್ಕಪ್ಪ, ಚಿಕ್ಕಮ್ಮನನ್ನು ಕತ್ತಿಯಿಂದ ಕಡಿದು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

Update: 2019-03-27 21:49 IST

ಸಿದ್ದಾಪುರ,ಮಾ.27: ಆಸ್ತಿ ಕಲಹಕ್ಕೆ ಸಂಬಂಧಿಸಿದಂತೆ ಯುವಕನೊಬ್ನ ತನ್ನ ಚಿಕ್ಕಪ್ಪ, ಚಿಕ್ಕಮ್ಮನನ್ನು ಕತ್ತಿಯಿಂದ ಕಡಿದು ಭೀಕರವಾಗಿ ಕೊಲೆ ಮಾಡಿ, ಬಳಿಕ ತಾನೂ‌ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಆಲೂರು ಸಿದ್ದಾಪುರದಲ್ಲಿ ಬುಧವಾರ ಸಂಜೆ ನಡೆದಿದೆ. 

ಇಲ್ಲಿಯ ನಿವಾಸಿ ನಿವೃತ್ತ ಪೊಲೀಸ್ ಪೇದೆ ಸೂದನ ಗಣೇಶ್(63) ಮತ್ತು ಪತ್ನಿ ಮೋಹಿನಿ (58) ಕೊಲೆಯಾದವರು. ಗಣೇಶ್ ಅಣ್ಣನ‌ ಮಗ ದಿಲೀಪ್ (32) ಕೊಲೆ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಾತ.

ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಗಣೇಶ್ ಮತ್ತು ದಿಲೀಪ್ ಕುಟುಂಬದ ಮಧ್ಯೆ ಹಿಂದಿನಿಂದಲೂ ಕಲಹಗಳು ನಡೆಯುತ್ತಿತ್ತು. ಬುಧವಾರ ಸಂಜೆಯೂ ಗಲಾಟೆ ನಡೆದಿದ್ದು, ಕೋಪಗೊಂಡು ಗಣೇಶ್ ಕತ್ತನ್ನು ದಿಲೀಪ್ ಕತ್ತರಿಸಿದ್ದಾನೆ. ಈ ವೇಳೆ ತಡೆಯಲು‌ ಬಂದ ಗಣೇಶ್ ಪತ್ನಿ ಮೋಹಿನಿಯ ಕತ್ತನ್ನೂ ನಿರ್ದಯವಾಗಿ ಕತ್ತರಿಸಿದ್ದು, ಇಬ್ಬರ ರುಂಡ ಮುಂಡ ಬೇರ್ಪಟ್ಟಿದೆ ಎನ್ನಲಾಗಿದೆ.

ಇದನ್ನು ಕಂಡು ತಡೆಯಲು ಬಂದ ಗಣೇಶ್ ಪುತ್ರ ಹರ್ಷಿತ್ (23) ಮೇಲೂ ದಿಲೀಪ್ ಕತ್ತಿಯಿಂದ ಹಲ್ಲೆ ಮಾಡಿದ್ದು, ಮಾರಣಾಂತಿಕ ಗಾಯಗೊಂಡು ಸಾವು‌ ಬದುಕಿನ ಮಧ್ಯೆ ಹೋರಾಡುತ್ತಿರುವ ಹರ್ಷಿತ್‌ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆ ನಂತರ ಗಣೇಶ್ ಅವರ ಮನೆಯಲ್ಲೇ ದಿಲೀಪ್ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೃತ್ತನಿರೀಕ್ಷಕ ನಂಜುಂಡೇ ಗೌಡ, ಠಾಣಾಧಿಕಾರಿ ತಿಮ್ಮಶೆಟ್ಟಿ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News