ಜಾತ್ಯತೀತ ಶಕ್ತಿಗಳ ಒಗ್ಗೂಡುವಿಕೆ ಪ್ರಜಾಪ್ರಭುತ್ವದ ಸೌಂದರ್ಯಕ್ಕೆ ಹಿಡಿದ ಕೈಗನ್ನಡಿ: ಹೆಚ್.ವಿಶ್ವನಾಥ್

Update: 2019-03-28 13:02 GMT

ಮಡಿಕೇರಿ, ಮಾ.28: ಕೋಮುವಾದಿಗಳನ್ನು ಮಣಿಸಲು ಜಾತ್ಯತೀತ ಶಕ್ತಿಗಳು ಒಗ್ಗೂಡಿರುವುದು ರಾಜ್ಯ ರಾಜಕಾರಣದ ಯುಗಾಂತರ ಮತ್ತು ದಿಕ್ಸೂಚಿ ಎಂದು ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಬಣ್ಣಿಸಿದ್ದಾರೆ.

ನಗರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಮತ್ತು ನೂತನ ಅಧ್ಯಕ್ಷ ಕೆ.ಎಂ.ಗಣೇಶ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದೇ ವೇದಿಕೆಯಲ್ಲಿ ಜಾತ್ಯತೀತ ಶಕ್ತಿಗಳು ಒಗ್ಗೂಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಭಿಪ್ರಾಯಪಟ್ಟರು. ದೇಶದ ಚುನಾವಣೆಯನ್ನು ವಿಶ್ವದ ಇತರ ದೇಶಗಳು ರಂಗು ರಂಗಿನ ಕನ್ನಡಕದ ಮೂಲಕ ವೀಕ್ಷಿಸುತ್ತಿದ್ದು, ಜಾತ್ಯತೀತ ಶಕ್ತಿಗಳು ಕೋಮುವಾದಿಗಳ ವಿರುದ್ಧ ಜಯ ಸಾಧಿಸಬೇಕಾಗಿದೆ ಎಂದು ವಿಶ್ವನಾಥ್ ಹೇಳಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಫಲ ತಾಂಬೂಲ, ಪ್ರೀತಿ ವಿಶ್ವಾಸದೊಂದಿಗೆ ಒಂದಾಗಿದ್ದು, ಇದು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಿದೆಯೆಂದು ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ಈಗಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಮತ್ತು ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಡಗು ಜಿಲ್ಲೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಪೊನ್ನಂಪೇಟೆ ಹಾಗೂ ಕುಶಾಲನಗರ ಎರಡು ಪ್ರತ್ಯೇಕ ಹೊಸ ತಾಲೂಕುಗಳನ್ನು ಘೋಷಿಸಲಾಗಿದೆ. ಕೊಡವ ಸಮಾಜಕ್ಕೆ 10 ಕೋಟಿ, ಹಾಕಿ ಸ್ಟೇಡಿಯಂ ನಿರ್ಮಾಣಕ್ಕೆ 5 ಕೋಟಿ, ಇತರ ಉಪ ಸಮಾಜಗಳ ಅಭಿವೃದ್ಧಿಗೆ 134 ಕೋಟಿ ರೂ. ನೆರವನ್ನು ಘೋಷಿಸಿದೆ. ಅಲ್ಲದೆ, ಅತಿವೃಷ್ಟಿ ಹಾನಿ ಪರಿಹಾರಕ್ಕಾಗಿ ಪ್ರಾಧಿಕಾರವನ್ನು ರಚಿಸಲಾಗಿದೆ. ರಾಜ್ಯ ಸರ್ಕಾರದ ಸಾಧನೆ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಮತಯಾಚಿಸುವಂತೆ ಕರೆ ನೀಡಿದರು.

ಜೆಡಿಎಸ್ ವೇದಿಕೆಯಲ್ಲಿ ಕಾಂಗ್ರೆಸ್ ನಾಯಕರು ಕಾಣಿಸಿಕೊಂಡಿರುವುದು ಸಂಭ್ರಮವನ್ನು ಹೆಚ್ಚಿಸಿದೆ ಎಂದರು. 2009 ರಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ನನ್ನ ಪ್ರತಿಸ್ಪರ್ಧಿಗಳಾಗಿ ಸಿ.ಹೆಚ್. ವಿಜಯಶಂಕರ್ ಹಾಗೂ ಜೀವಿಜಯ ಸ್ಪರ್ಧಿಸಿದ್ದರು. ಅಂದು ನಾನು ಸಂಸದನಾಗಿ ಆಯ್ಕೆಯಾಗಿದ್ದೆ, ಇಂದು ಒಂದೇ ವೇದಿಕೆಯಲ್ಲಿ ನಾನು ಮತ್ತು ವಿಜಯಶಂಕರ್ ಒಂದಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಗಟ್ಟಿತನವೆಂದು ತಿಳಿಸಿದರು.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಹೆಚ್.ವಿಜಯ ಶಂಕರ್ ಮಾತನಾಡಿ, ಜೆಡಿಎಸ್ ಮತ್ತು ಕಾಂಗ್ರೆಸ್ ಒಂದೇ ವೇದಿಕೆಯಲ್ಲಿ ಸಂಗಮವಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಇಲ್ಲಿ ಅಭ್ಯರ್ಥಿಯಾಗಿ ನಾನು ಸಂಕೇತ ಮಾತ್ರ. ಜಾತ್ಯತೀತ ಶಕ್ತಿಗಳು ಗೆಲುವು ಸಾಧಿಸಬೇಕಾಗಿದೆ ಎಂದರು. ಈ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಬಲವಾಗಿ ಬೇರೂರಿದ್ದು, ಮಾನಸಿಕವಾಗಿ ಎರಡೂ ಪಕ್ಷಗಳು ಒಗ್ಗಟ್ಟಾಗಿ ಶ್ರಮಿಸಿದರೆ ಸುಲಭ ಗೆಲುವು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೊಡಗು ಸಂಕಷ್ಟದಲ್ಲಿದ್ದರು ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ.ನಾವು ಗೆಲುವು ಸಾಧಿಸಿದರೆ ಪ್ರತಿಯೊಂದು ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸುವುದಾಗಿ ವಿಜಯಶಂಕರ್ ಭರವಸೆ ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಕೆ.ಎಂ. ಗಣೇಶ್, ನಾನು ಯಾವುದೇ ಅಧಿಕಾರಕ್ಕಾಗಿ ಆಸೆ ಪಟ್ಟು ಜೆಡಿಎಸ್‍ಗೆ ಸೇರ್ಪಡೆಗೊಂಡಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ದುಡಿಯಲು ಆಗಮಿಸಿದ್ದೆ. ಆದರೆ, ಪಕ್ಷದ ವರಿಷ್ಟರು ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶ ನೀಡಿದ ಹಿನ್ನೆಲೆ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸುತ್ತಿದ್ದೇನೆ. ಪಕ್ಷದ ಅಧ್ಯಕ್ಷ ಸ್ಥಾನ ಯಾರಿಗೂ ಶಾಶ್ವತವಲ್ಲ. ಆದರೆ, ಆ ಸ್ಥಾನದಲ್ಲಿದ್ದಾಗ ಏನು ಸಾಧನೆ ಮಾಡಿದ್ದೇನೆ ಎನ್ನುವುದು ಮುಖ್ಯ. ಮುಂದೆ ಲೋಕಸಭೆ, ನಗರಸಭೆ, ಗ್ರಾಮ ಪಂಚಾಯತ್ ಹಾಗೂ ವಿಧಾನ ಸಭಾ ಚುನಾವಣೆಗಳು ಬಂದರೂ ಸ್ಪರ್ಧಿಸದೆ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕೆ ಶ್ರಮಿಸುವುದಾಗಿ ತಿಳಿಸಿದರು. 

ಕಾರ್ಯಕರ್ತರ ಬೆಂಬಲದೊಂದಿಗೆ ಪಕ್ಷ ಸಂಘಟಿಸುವುದಾಗಿ ತಿಳಿಸಿದ ಅವರು, ಎಲ್ಲರೂ ಒಗ್ಗಟ್ಟಾಗಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವುದರೊಂದಿಗೆ ಜಾತ್ಯತೀತ ನಿಲುವನ್ನು ಗಟ್ಟಿಗೊಳಿಸೋಣವೆಂದು ಕರೆ ನೀಡಿದರು.

ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯ್ಯದ್ ಅಲ್ತಾಫ್, ಪ್ರಮುಖರಾದ ಪದ್ಮಿನಿ ಪೊನ್ನಪ್ಪ, ಸಿ.ವಿ. ನಾಗೇಶ್, ಜೆಡಿಎಸ್ ಮಾಜಿ ಅಧ್ಯಕ್ಷ ಸಂಕೇತ್ ಪೂವಯ್ಯ, ಪುಷ್ಪಾ ನಾಗರಾಜ್ ಮಾತನಾಡಿದರು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮನ್ಸೂರ್ ಆಲಿ, ಉಪಾಧ್ಯಕ್ಷ ಎಂ.ಎಂ.ಶರೀಫ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಪ್ರಮುಖರಾದ ಕುಸುಮ್ ಕಾರ್ಯಪ್ಪ, ಮತೀನ್, ಸಿ.ಎಲ್. ವಿಶ್ವ, ಲೀಲಾ ಶೇಷಮ್ಮ ಮತ್ತಿತರರು ಉಪಸ್ಥಿತರಿದ್ದರು.

ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕೊಡಗು ಮೈಸೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಸೇರಿದಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್, ಮಾಜಿ ಎಂಎಲ್‍ಸಿ ಸಿ.ಎಸ್. ಅರುಣ್ ಮಾಚಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಸದಸ್ಯ ಟಿ.ಪಿ.ರಮೇಶ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ವೇದಿಕೆ ಹಂಚಿಕೊಂಡದ್ದು ವಿಶೇಷವಾಗಿತ್ತು. 

ಸಭಾ ಕಾರ್ಯಕ್ರಮಕ್ಕೂ ಮೊದಲು ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಮೆರವಣಿಗೆ ನಡೆಸಿದರು.

ಕೆ.ಎಂ.ಗಣೇಶ್ ಜೆಡಿಎಸ್‍ನ ಅಧಿಕೃತ ಅಧ್ಯಕ್ಷ: ವಿಶ್ವನಾಥ್ ಘೋಷಣೆ
ಕೆ.ಎಂ.ಗಣೇಶ್ ಅವರು ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಅಧಿಕೃತ ಅಧ್ಯಕ್ಷ ಎಂದು ಘೋಷಿಸಿದ ಹೆಚ್.ವಿಶ್ವನಾಥ್, ಯಾರೂ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದೆಂದರು. ಜೆಡಿಎಸ್ ರಾಷ್ಟ್ರಾಧ್ಯಕ್ಷರಾದ ಹೆಚ್.ಡಿ.ದೇವೇಗೌಡರ ಆದೇಶದ ಮೇರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ಅವರ ಆಶಯದಂತೆ ಗಣೇಶ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದು, ಇವರೊಂದಿಗೆ ನಾವಿದ್ದೇವೆ ಎಂದು ವಿಶ್ವನಾಥ್ ಘೋಷಿಸಿದರು. ವಿನಾಕಾರಣ ಯಾರೂ ಗೊಂದಲ ಸೃಷ್ಟಿಸಬಾರದೆಂದ ಅವರು, ಗಣೇಶ್ ಅವರಿಗೆ ಸಂಘಟನಾ ಶಕ್ತಿ ಇದೆಯೆಂದು ತಿಳಿಸಿದರು.

ಕೆ.ಎಂ.ಗಣೇಶ್ ಮಾತನಾಡಿ ಜೀವಿಜಯ ಅವರನ್ನು ಆರಂಭದಿಂದಲೆ ನಮ್ಮ ನಾಯಕರೆಂದು ಗೌರವಿಸುತ್ತಾ ಬಂದಿದ್ದೆ. ಆದರೆ, ನಾನು ಅಧ್ಯಕ್ಷನಾದ ನಂತರ ಕೆಲವರು ನನ್ನನ್ನು ಅವಹೇಳನ ಮಾಡಿದರು ಮತ್ತು ಪಕ್ಷಕ್ಕೆ ಮುಜುಗರ ತಂದರು ಎಂದು ಗಣೇಶ್ ಬೇಸರ ವ್ಯಕ್ತಪಡಿಸಿದರು. ನಾನು ಯಾವುದೇ ಮಾತುಗಳಿಗೆ ಜಗ್ಗುವುದಿಲ್ಲ, ಕುಗ್ಗುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News