ತುಮಕೂರಿನಲ್ಲಿ ಕಾಂಗ್ರೆಸ್ ಬಂಡಾಯ ಶಮನ: ನಾಮಪತ್ರ ವಾಪಾಸ್ ಗೆ ಒಪ್ಪಿಗೆ ?
ತುಮಕೂರು,ಮಾ.28: ಮೈತ್ರಿ ಅಭ್ಯರ್ಥಿ ವಿರುದ್ಧ ಬಂಡಾಯವೆದ್ದಿದ್ದ ಸಂಸದ ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದು, ಇಬ್ಬರು ನಾಮಪತ್ರ ವಾಪಾಸ್ ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಅವರು ತಮ್ಮ ನಿವಾಸ ಕಾವೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜತೆಗೂಡಿ ಸತತ ಸಭೆ ನಡೆಸಿ ಮೈತ್ರಿ ಅಭ್ಯರ್ಥಿಯ ಎದುರು ಸ್ಪರ್ಧಿಸುವುದರಿಂದ ಪಕ್ಷಕ್ಕೆ ಆಗುವ ಹಾನಿ ಮತ್ತು ಫಲಿತಾಂಶದ ಮೇಲಿನ ಪರಿಣಾಮಗಳ ಬಗ್ಗೆ ಮನವರಿಕೆ ಮಾಡುವ ಮೂಲಕ ನಾಮಪತ್ರ ವಾಪಾಸ್ ಪಡೆಯುವಂತೆ ಮನವೊಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇವೇಗೌಡ ವಿರುದ್ಧ ಇಬ್ಬರು ಕಾಂಗ್ರೆಸ್ ನಾಯಕರು ಸಲ್ಲಿಸಿರುವ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ನಾಳೆ ಕೊನೆಯ ದಿನವಾಗಿದೆ. ಮುದ್ದಹನುಮೇಗೌಡ ನಾಳೆ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲಿದ್ದಾರೆ. ಮತ್ತೊಬ್ಬ ಬಂಡಾಯ ಅಭ್ಯರ್ಥಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕೂಡ ತಮ್ಮ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಮಧುಗಿರಿ ಕ್ಷೇತ್ರ ಮಾಜಿ ಶಾಸಕರಾದ ರಾಜಣ್ಣ, ಪಕ್ಷದ ವಿರುದ್ಧ ಅಸಮಾಧಾನಗೊಂಡು ಕಣಕ್ಕೆ ಇಳಿದಿದ್ದರು. ನಾಮಪತ್ರ ವಾಪಾಸ್ ಪಡೆಯಲು ಬಂಡಾಯ ಅಭ್ಯರ್ಥಿಗಳು ಒಪ್ಪಿಕೊಂಡಿರುವುದರಿಂದ ಬಿಜೆಪಿಯ ಜಿ.ಎಸ್. ಬಸವರಾಜ್ ಮತ್ತು ದೇವೇಗೌಡ ಅವರ ನಡುವೆ ಇಲ್ಲಿ ನೇರ ಹಣಾಹಣಿ ನಡೆಯಲಿದೆ.