ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು, ಮಾ. 28: ಹಾಸನ ಜಿಲ್ಲೆಯ ಬಿಜೆಪಿ ಘಟಕದ ಅಧ್ಯಕ್ಷ ಯೋಗಾ ರಮೇಶ್ ಅವರು ಪಕ್ಷ ತೊರೆದು ವಿದ್ಯುಕ್ತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಯೋಗಾ ರಮೇಶ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಗುರುವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಝಮೀರ್ ಅಹ್ಮದ್ ಖಾನ್, ಯೋಗಾ ರಮೇಶ್ ಅವರಿಗೆ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ. ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಕೊಂಚ ಹಿನ್ನೆಡೆಯಾಗಿತ್ತು. ಭವಿಷ್ಯದಲ್ಲಿ ಪಕ್ಷಕ್ಕೆ ಒಳ್ಳೆಯದಾಗಲಿದೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದವರೆ ಇಂದು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ನಮ್ಮ ಉದ್ದೇಶ ಬಿಜೆಪಿಯನ್ನು ಸೋಲಿಸುವುದು. ಹೀಗಾಗಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಈಗ ಯೋಗಾ ರಮೇಶ್ ಪಕ್ಷಕ್ಕೆ ಸೇರ್ಪಡೆಯಿಂದ ಹಾಸನ ಜಿಲ್ಲೆಗೆ ಆನೆ ಬಲ ಬಂದಂತಾಗಿದೆ ಎಂದ ಅವರು, ಎ.ಮಂಜು ತಮ್ಮ ಸ್ವಾರ್ಥಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ. ಅವರಿಗೆ ಮುಂದೆ ತಮ್ಮ ತಪ್ಪಿನ ಅರಿವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್, ಹಾಸನ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾಅಮರನಾಥ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು.
ನವಿಲೆ ಅಣ್ಣಪ್ಪ ಹಾಸನ ಜಿಲ್ಲಾಧ್ಯಕ್ಷ
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹಾಸನದ ತಾತ್ಕಾಲಿಕ ಜಿಲ್ಲಾಧ್ಯಕ್ಷರನ್ನಾಗಿ ನವಿಲೆ ಅಣ್ಣಪ್ಪ ಅವರನ್ನು ನೇಮಕ ಮಾಡಲಾಗಿದೆ. ಈ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಶ್ರಮಿಸಬೇಕೆಂದು ಆಶಿಸುತ್ತೇನೆ
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ