ನಿಖಿಲ್ ಗೆಲುವಿಗೆ ಕಾಂಗ್ರೆಸ್ ಮುಖಂಡರ ಬೆಂಬಲ ಕೋರಿದ ಸಿಎಂ

Update: 2019-03-28 16:42 GMT

ಮಂಡ್ಯ, ಮಾ.28: ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಗೆಲುವಿಗೆ ಟೊಂಕ ಕಟ್ಟಿನಿಂತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಗರದ ಹಲವು ಬಡಾವಣೆಗಳಲ್ಲಿನ ಮುಖಂಡರ ಮನೆಗೆ ಭೇಟಿ ನೀಡಿ ಮೈತ್ರಿ ಅಭ್ಯರ್ಥಿ ಪರ ಬೆಂಬಲ ಕೋರಿದರು.

ಬುಧವಾರ ಮತ್ತು ಗುರುವಾರ ಮಧ್ಯಾಹ್ನ ಕಾಂಗ್ರೆಸ್, ಜೆಡಿಎಸ್ ಮುಖಂಡರು ಮಾತ್ರವಲ್ಲದೆ ಪಕ್ಷಾತೀತವಾಗಿ ಗುರುತಿಸಿಕೊಂಡಿರುವ ಹಲವು ಮುಖಂಡರು, ಜನಪ್ರತಿನಿಧಿಗಳ ಮನೆಗೂ ಭೇಟಿ ನೀಡಿ ತಮ್ಮ ಪುತ್ರನ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು. 

ಮಾಜಿ ಸಂಸದ ಜಿ.ಮಾದೇಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಕಾಂಗ್ರೆಸ್ ಮುಖಂಡರಾದ ಎಂ.ಎಸ್.ಚಿದಂಬರ್, ರಾಮಲಿಂಗಯ್ಯ, ವಕೀಲ ಎಂ.ಗುರುಪ್ರಸಾದ್, ನಗರಸಭೆ ಮಾಜಿ ಅಧ್ಯಕ್ಷ ಲೋಕೇಶ್, ಜೆಡಿಎಸ್ ಮಹಿಳಾಧ್ಯಕ್ಷೆ ಮಂಜುಳಾ ಉದಯಶಂಕರ್, ಮೂಡಾ ಮಾಜಿ ಅಧ್ಯಕ್ಷ ಅಸಾದುಲ್ಲಾಖಾನ್, ಹೊಸಹಳ್ಳಿ ಬೋರೇಗೌಡ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಸೇರಿದಂತೆ ಹಲವರ ಮನೆಗೆ ಭೇಟಿ ನೀಡಿದ್ದರು.

ರಾಷ್ಟ್ರೀಯ ಬಸವದಳದ ಅಧ್ಯಕ್ಷ ಎಂ.ಗುರುಪ್ರಸಾದ್ ಮನೆಗೆ ಭೇಟಿ ನೀಡಿದ ಕುಮಾರಸ್ವಾಮಿ ಅವರಿಗೆ ಬಸವ ಫೌಂಡೇಶನ್ ಉಪಾಧ್ಯಕ್ಷೆ ಅಪರ್ಣ ಅವರು ವಿಭೂತಿ ಧರಿಸಿ ಸ್ವಾಗತ ಕೋರಿದರು. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿಶ್ವಗುರು ಬಸವೇಶ್ವರರ ಪುತ್ಥಳಿಯನ್ನು ನಿರ್ಮಾಣ ಮಾಡಬೇಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಬಸವಭವನ ನಿರ್ಮಾಣ ಮಾಡಲು ಸರಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

ಸಂಸದ ಎಲ್.ಆರ್.ಶಿವರಾಮೇಗೌಡ, ಝಫರುಲ್ಲಾಖಾನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News