ಮಂಡ್ಯ 'ಕೈ' ಮುಖಂಡರು, ಕಾರ್ಯಕರ್ತರಲ್ಲಿ ಅಸಮಾಧಾನ: ಮಾ.31ಕ್ಕೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ
ಮಂಡ್ಯ, ಮಾ.28: ಲೋಕಸಭಾ ಚುನಾವಣೆ ಸಂಬಂಧ ಜಿಲ್ಲಾ ಕಾಂಗ್ರೆಸ್‍ನ ಮುಖಂಡರು ಮತ್ತು ಕಾರ್ಯಕರ್ತರಲ್ಲಿರುವ ಅಸಮಾಧಾನಗಳನ್ನು ಬಗೆಹರಿಸುವ ಸಲುವಾಗಿ ಮಾ.31ರಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದ್ದಾರೆ.
ಗುರುವಾರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅಂದು ನಡೆಯುವ ಸಭೆಯಲ್ಲಿ ಎಲ್ಲಾ ಗೊಂದಲ ಇತ್ಯರ್ಥವಾಗಲಿದೆ. ಅಂದಿನಿಂದಲೇ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಗುವುದು. ಒಂದು ವೇಳೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದರೆ ವರಿಷ್ಠರಿಗೆ ವರದಿ ನೀಡಲಾಗುವುದು ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಪಕ್ಷದ ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದಿರುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ರಾಜ್ಯಮಟ್ಟದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಮಾಜಿ ಶಾಸಕ ಎಚ್.ಬಿ.ರಾಮು ಅವರಿಗೆ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ನೀಡಿಲ್ಲ ಎಂಬ ಕಾರಣಕ್ಕೆ ಮಂಡ್ಯ ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸುತ್ತಿರುವುದು ತಪ್ಪು. ಸಚಿವ ಸಿ.ಎಸ್.ಪುಟ್ಟರಾಜು ಮತ್ತು ಇತರರ ಮೇಲೆ ಚುನಾವಣಾ ಸಂದರ್ಭದಲ್ಲಿ ನಡೆದಿರುವ ಐಟಿ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಅವರು ಆರೋಪಿಸಿದರು.
ನಗರಸಭಾ ಸದಸ್ಯರಾದ ಪೂರ್ಣಿಮಾ, ನಯೀಂ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಚಿಜನಾ ಶ್ರೀಕಾಂತ್, ಮುಖಂಡರಾದ ರಾಮೇಗೌಡ, ಪಾಪಣ್ಣ, ಲೋಕೇಶ್ ಹಾಗೂ ಪುಟ್ಟೇಗೌಡ ಉಪಸ್ಥಿತರಿದ್ದರು.