ಐಟಿ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ: ಸುಮಲತಾ
ಮೈಸೂರು,ಮಾ.28: ಜೆಡಿಎಸ್ ನಾಯಕರ ಮನೆ ಮೇಲಿನ ಐಟಿ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ನನಗೆ ಇಷ್ಟೊಂದು ಪವರ್ ಇದೆ ಅಂದ್ರೆ ಸಂತೋಷ ಪಡುತ್ತಿದ್ದೆ. ನನ್ನ ವಿರುದ್ಧ ಮಾತನಾಡೋದು ದೇವರು ಕೂಡ ಒಪ್ಪಲ್ಲ ಎಂದು ಸಚಿವ ಸಿಎಸ್ ಪುಟ್ಟರಾಜು ವಿರುದ್ಧ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕಿಡಿಕಾರಿದರು.
ಐಟಿ ದಾಳಿಯಲ್ಲಿ ಸುಮಲತಾ ಅವರ ಕೈವಾಡ ಕುರಿತು ಸಚಿವ ಸಿ.ಎಸ್ ಪುಟ್ಟರಾಜು ಮಾತನಾಡಿದ್ದರು. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ಈ ಬಗ್ಗೆ ನಮ್ಮ ಕುಟುಂಬ ಹಾಗೂ ಪುಟ್ಟರಾಜು ಸಂಬಂಧ ನೆನಪಿಸಿಕೊಳ್ಳಲಿ. ಮನಸಾಕ್ಷಿ ಸ್ವಲ್ಪವಾದರೂ ಇದ್ದರೆ ನಮ್ಮ ಕುಟುಂಬದ ಜೊತೆ ಅವರು ಹೇಗಿದ್ದರು ಅಂತ ನೆನಪಿಸಿಕೊಳ್ಳಲಿ. ಕಣ್ಣು ಮುಚ್ಚಿ ಅಂಬರೀಶ್ ಅವರನ್ನು ಒಮ್ಮೆ ನೆನಪಿಸಿಕೊಳ್ಳಲಿ. ನಮ್ಮ ಕುಟುಂಬದ ವಿರುದ್ಧ ಮಾತಾಡುವ ಮುನ್ನ ಯೋಚಿಸಲಿ. ನನ್ನ ವಿರುದ್ಧ ನೀವು ಮಾತನಾಡೋದು ದೇವರು ಕೂಡ ಒಪ್ಪಲ್ಲ ಎಂದು ವಾಗ್ದಾಳಿ ನಡೆಸಿದರು.
ಆದಾಯ ತೆರಿಗೆ ದಾಳಿಯನ್ನು ನಾನೇ ಮಾಡಿಸಿದ್ದೇನೆ ಎಂದು ಹೇಳುತ್ತಾರೆ. ಆದರೆ ಜನ ಇದನ್ನು ಒಪ್ಪಲ್ಲ. ನಾನು ಅಂಬರೀಷ್ ಪತ್ನಿ. ಅವರು ಎಂದೂ ಈ ರೀತಿಯ ಕುತಂತ್ರದ ರಾಜಕಾರಣ ಮಾಡಿಲ್ಲ. ನಾನು 25 ವರ್ಷದಿಂದ ಅಂಬರೀಶ್ ಜೊತೆ ರಾಜಕೀಯ ನೋಡಿದ್ದೇನೆ. ನನಗೆ ನಿಖಿಲ್ ಹೆಸರಿನಲ್ಲಿ ನಾಮಪತ್ರ ಸಲ್ಲಿಸಲು ಹೇಳಿದ್ದರು. ನಾನು ಬೇಕಿದ್ದರೆ 9 ಜನ ನಿಖಿಲ್‍ರನ್ನು ನಿಲ್ಲಿಸಬಹುದಿತ್ತು. ಆದರೆ ಅದನ್ನು ನಾನು ಬೇಡ ಎಂದು ಹೇಳಿದ್ದೆ. ನಾನು ನೇರವಾಗಿ ಹೋರಾಟ ಮಾಡುತ್ತೇನೆ. ಹಿಂಬಾಗಿಲಿನ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ಅವರು ಮೂರು ಜನ ಸುಮಲತಾ ಹೆಸರಿನ ಅಭ್ಯರ್ಥಿಗಳನ್ನ ನಿಲ್ಲಿಸಿದರು. ಆದರೆ ನಾನು ಅಷ್ಟೊಂದು ಕೀಳು ಮಟ್ಟಕ್ಕೆ ಇಳಿದು ರಾಜಕಾರಣ ಮಾಡಲ್ಲ ಎಂದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.
ಐಟಿ ವಿಚಾರವಾಗಿ ಜೆಡಿಎಸ್‍ನವರು ಮಂಡ್ಯದಲ್ಲಿ ಡ್ರಾಮ ಮಾಡಲಿದ್ದಾರೆ. ನಾನು ಒಬ್ಬ ಎಂಪಿ ಕ್ಯಾಂಡಿಡೇಟ್. ನನಗೆ ಇದರ ಬಗ್ಗೆ ಏನು ಗೊತ್ತಿರುತ್ತೆ ನೀವೆ ಹೇಳಿ. ಇದರಲ್ಲೂ ಜೆಡಿಎಸ್ ಸಿಂಪಥಿ ಪಡೆಯಲು ಯತ್ನ ನಡೆಸುತ್ತಿದೆ ಎಂದು ಹೇಳಿದರು.