ಜೆಡಿಎಸ್ ಅಭ್ಯರ್ಥಿ ನಿಖಿಲ್ ನಾಮಪತ್ರ ಕ್ರಮಬದ್ಧ: ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ಸ್ಪಷ್ಟನೆ

Update: 2019-03-28 17:17 GMT

ಮಂಡ್ಯ, ಮಾ.28: ಲೋಕಸಭಾ ಚುನಾವಣೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ನಾಮಪತ್ರದಲ್ಲಿದ್ದ ನೂನ್ಯತೆ ಸರಿಪಡಿಸಿಕೊಂಡಿದ್ದು, ಯಾವುದೇ ಲೋಪವಾಗಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ಹೇಳಿದ್ದಾರೆ.

ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ಅಫಿದಾವಿತ್‍ನಲ್ಲಿ ಎರಡು ಕಾಲಂಗಳನ್ನು ಭರ್ತಿ ಮಾಡಿರಲಿಲ್ಲ. ಇದನ್ನು ಸರಿಪಡಿಸಿ ಮತ್ತೊಂದು ಅಫಿದಾವಿತ್ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಅದರಂತೆ ಸರಿ ಮಾಡಿದ ಅಫಿದಾವಿತ್ ಸಲ್ಲಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಿಖಿಲ್ ನಾಮಪತ್ರದ ನೂನ್ಯತೆ ಸಂಬಂಧ ಮಾಧ್ಯಮಗಳಲ್ಲಿ ಬಂದ ವರದಿ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ತುರ್ತು ಸುದ್ದಿಗೋಷ್ಠಿ ನಡೆಸಿದ ಎನ್.ಮಂಜುಶ್ರೀ, ತನ್ನಿಂದ ಯಾವುದೇ ಲೋಪವಾಗಿಲ್ಲ ಎಂಬ ಎಂಬುದಾಗಿ ಪ್ರತಿಪಾದಿಸಿದರು.

ಚುನಾವಣಾ ಆಯೋಗದ ನಿಯಮದ ಪ್ರಕಾರ ನಾಮಪತ್ರ(ನಮೂನೆ 26)ದ ಅಫಿದಾವಿತ್‍ನಲ್ಲಿ ನೂನ್ಯತೆ ಕಂಡು ಬಂದರೆ, ಅದನ್ನು ಗೊತ್ತುಮಾಡಿ ಪರಿಶೀಲನಾ ಪಟ್ಟಿ(ಚೆಕ್‍ಲಿಸ್ಟ್)ಯನ್ನು ಸಂಬಂಧಿಸಿ ಅಭ್ಯರ್ಥಿಗೆ ನೀಡುತ್ತೇವೆ. ಅವರು ಅದನ್ನು ಸರಿಪಡಿಸಿ ಹೊಸ ಅಫಿದಾವಿತ್‍ ಅನ್ನು ನಾಮಪತ್ರ ಪರಿಶೀಲನೆ ಮುನ್ನ ನಮಗೆ ತಲುಪಿಸಬಹುದು ಎಂದು ಅವರು ವಿವರಿಸಿದರು.

ಹಾಗೆಯೇ ನಿಖಿಲ್ ಅವರ ಅಫಿದಾವಿತ್‍ನಲ್ಲಿ ನೂನ್ಯತೆ ಕಂಡುಬಂದಿತು. ಅವರಿಗೆ ಚೆಕ್‍ಲಿಸ್ಟ್ ಅನ್ನು ಮಾ.25ರಂದು ಕಳುಹಿಸಲಾಗಿತ್ತು. ಸರಿಮಾಡಿದ ಅಫಿದಾವಿತ್‍ ಅನ್ನು ನಿಖಿಲ್ ಅವರ ಏಜೆಂಟ್ ಡಿ.ರಮೇಶ್ ನಾಮಪತ್ರ ಪರಿಶೀಲನೆಗೆ ಮುನ್ನ ಮಾ.27ರಂದು ಬೆಳಗ್ಗೆ 10 ಗಂಟೆಗೆ ತಂದು ಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ನಾಮಪತ್ರ ಪರಿಶೀಲನೆ ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಏಜೆಂಟ್ ಮದನ್ ಕೂಡಾ ಉಪಸ್ಥಿತರಿದ್ದರು. ಪರಿಶೀಲನೆಗೆ ಮುನ್ನ ಯಾವುದೇ ಆಕ್ಷೇಪಣೆ ಮಾಡಲಿಲ್ಲ. ಆದರೆ, ನಾಮಪತ್ರ ಪರಿಶೀಲನೆಯಾಗಿ ಅಂಗೀಕಾರಗೊಂಡ ನಂತರ ಆಕ್ಷೇಪಣೆ ಮಾಡಿದರು ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.

ನಾನು ಕಾನೂನು ಪ್ರಕಾರ ನಡೆದುಕೊಂಡಿದ್ದು, ಯಾವುದೇ ಪಕ್ಷಪಾತ ಮಾಡಿಲ್ಲ. ಹಾಗೇನಿದ್ದರೂ ಆಕ್ಷೇಪಣೆ ಇದ್ದರೆ ದೂರು ನೀಡಬಹುದೆಂದು ಮದನ್ ಅವರಿಗೆ ಸೂಚಿಸಿದ್ದು, ದೂರು ನೀಡಿದ್ದಾರೆ. ಜತೆಗೆ ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿನ ವೀಡಿಯೋ ವಿವರವನ್ನೂ ಕೇಳಿದ್ದು, ಅದನ್ನು ನೀಡಲಾಗುವುದು. ಅಗತ್ಯವಿದ್ದರೆ ಕೋರ್ಟ್‍ಗೆ ಹೋಗಬಹುದು ಎಂದು ಮಂಜುಶ್ರೀ ಸ್ಪಷ್ಟಪಡಿಸಿದರು.

ತಾನು ಯಾವುದೇ ಪಕ್ಷ, ಅಭ್ಯರ್ಥಿ ಪರವಾಗಿ ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಯತ್ನ ನಡೆಸಿಲ್ಲ. ಕಾನೂನು ಪ್ರಕಾರ ನನ್ನ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದೇನೆ. ಶಾಂತಿಯುತ, ನಿಷ್ಪಕ್ಷಪಾತ ಚುನಾವಣೆ ನಡೆಯಲು ಸಾರ್ವಜನಿರು ಸಹಕರಿಸಬೇಕು. ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದರು.

ಜೆಡಿಎಸ್ ಅಭ್ಯರ್ಥಿ ನಿಖಿಲ್ ಅವರ ಪ್ರತಿನಿಧಿ ಡಿ.ರಮೇಶ್, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಪ್ರತಿನಿಧಿ ಮದನ್, ಬಿಎಸ್ಪಿ ಅಭ್ಯರ್ಥಿ ನಂಜುಂಡಸ್ವಾಮಿ, ಎಂಜನಿಯರ್ ಪಕ್ಷದ ಅಭ್ಯರ್ಥಿ ಹಾಗೂ ಸಾಮಾನ್ಯ ಚುನವಣಾ ವೀಕ್ಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News