×
Ad

ಐಟಿ ದಾಳಿ ಖಂಡಿಸಿ ಜೆಡಿಎಸ್ ಕಾರ್ಯಕರ್ತರಿಂದ ರಸ್ತೆ ತಡೆ

Update: 2019-03-28 22:51 IST

ಪಾಂಡವಪುರ, ಮಾ.28: ಸಚಿವ ಸಿ.ಎಸ್.ಪುಟ್ಟರಾಜು ಅಣ್ಣನ ಪುತ್ರ ಸಿ.ಅಶೋಕ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದನ್ನು ಖಂಡಿಸಿ ಚಿನಕುರಳಿ ಗ್ರಾಮ ಹಾಗೂ ಪಟ್ಟಣದ ಐದು ದೀಪದ ವೃತ್ತದ ಬಳಿ ಜೆಡಿಎಸ್ ಕಾರ್ಯಕರ್ತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಚಿನಕುರಳಿ ಗ್ರಾಮದಲ್ಲಿರುವ ಸಚಿವ ಸಿ.ಎಸ್.ಪುಟ್ಟರಾಜು ಅವರ ಅಣ್ಣನ ಮಗ ಸಿ.ಅಶೋಕ್ ಅವರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆಯೇ ಮನೆ ಬಳಿ ಜಮಾವಣೆಗೊಂಡ ಕಾರ್ಯಕರ್ತರು ಸಚಿವ ಸಿ.ಎಸ್.ಪುಟ್ಟರಾಜು ಪರ ಘೋಷಣೆಗಳನ್ನು ಮೊಳಗಿಸಿದರು. ಬಳಿಕ ರಸ್ತೆಗಿಳಿದು, ಮೈಸೂರು-ಶಿವಮೊಗ್ಗ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಐಟಿ ದಾಳಿ ಮೂಲಕ ಸಚಿವ ಸಿ.ಎಸ್.ಪುಟ್ಟರಾಜು ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಹಾಗೂ ಅವರ ಹೆಸರಿಗೆ ಕಪ್ಪು ಮಸಿ ಬಳಿಯಲು ಬಿಜೆಪಿ ಕುತಂತ್ರ ನಡೆಸಿದೆ. ಆದರೆ, ಬಿಜೆಪಿಯ ಈ ಕುತಂತ್ರ ಫಲಿಸದು. ಪುಟ್ಟರಾಜು ಅಕ್ರಮ ಆಸ್ತಿ ಮಾಡಿಲ್ಲ. ಆದಾಯ-ಖರ್ಚಿಗೆ ಸೂಕ್ತ ದಾಖಲಾತಿಗಳನ್ನಿಟ್ಟಿದ್ದಾರೆ. ಜತೆಗೆ ಆದಾಯಕ್ಕಿಂತಲೂ ಖರ್ಚು ಹೆಚ್ಚಾಗಿದೆ. ಐಟಿ ದಾಳಿಯಿಂದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿನ ಅಂತರ ಮತ್ತಷ್ಟು ಹೆಚ್ಚಾಗಲಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಪ್ರತಿಭಟನೆಯಲ್ಲಿ ತಾಪಂ ಸದಸ್ಯ ಅಲ್ಪಹಳ್ಳಿ ಗೋವಿಂದಯ್ಯ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪ್ರಕಾಶ್, ಗ್ರಾ.ಪಂ ಸದಸ್ಯ ಮಹದೇವು, ಎರೇಗೌಡನಹಳ್ಳಿ ಯೋಗರಾಜು, ನಿಸಾರ್ ಅಹ್ಮದ್, ಮಹ್ಮದ್ ಮೊಂಮ್ತಿಯಾಸ್‍ಪಾಷ ಇತರರು ಭಾಗವಹಿಸಿದ್ದರು.

ಪಾಂಡವಪುರದಲ್ಲೂ ಪ್ರತಿಭಟನೆ: ಇದೇ ವೇಳೆ ಪಾಂಡವಪುರ ಪಟ್ಟಣದ ಐದು ದೀಪದ ವೃತ್ತ ಬಳಿಯೂ ಶ್ರೀರಂಗಪಟ್ಟಣ-ಬೀದರ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಕೇಂದ್ರದ ಬಿಜೆಪಿ ಸರಕಾರ ಹಾಗೂ ಐಟಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಜೆಡಿಎಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರಮೋದಿ ಅವರ ಕೇಂದ್ರ ಸರಕಾರ ರಾಜಕೀಯ ಪ್ರೇರಿತವಾಗಿ ಐಟಿ ದಾಳಿ ನಡೆಸುವ ಮೂಲಕ ರಾಜ್ಯದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಹಾಗೂ ಸಚಿವ ಸಿ.ಎಸ್.ಪುಟ್ಟರಾಜು ಅವರ ನೈತಿಕ ಸ್ಥೈರ್ಯ ಕುಗ್ಗಿಸಲು ಹೊರಟಿದ್ದಾರೆ. ಎಂದಿಗೂ ಸಾಧ್ಯವಾಗದು ಎಂದು ಕಿಡಿಕಾರಿದರು.

ಜೆಡಿಎಸ್ ಅಧ್ಯಕ್ಷ ಹಿರೇಮರಳಿ ಧರ್ಮರಾಜು, ಜಿ.ಪಂ ಸದಸ್ಯ ಸಾಮಿಲ್ ತಿಮ್ಮೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರಾದ ಎಚ್.ಎಲ್.ನಂಜೇಗೌಡ, ರಾಮಕೃಷ್ಣೇಗೌಡ, ಮನ್‍ಮುಲ್ ಮಾಜಿ ಅಧ್ಯಕ್ಷ ಕೆ.ವೈರಮುಡಿಗೌಡ, ಪುರಸಭೆ ಸದಸ್ಯ ಎಂ.ಗಿರೀಶ್, ಮಾಜಿ ಅಧ್ಯಕ್ಷ ಪಿ.ಎಸ್.ಜಗದೀಶ್ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಕೃಷ್ಣರಾಜಪೇಟೆ ಹಾಗೂ ಶ್ರೀರಂಗಪಟ್ಟಣದಲ್ಲೂ ಜೆಡಿಎಸ್ ಕಾರ್ಯಕರ್ತರು ರಸ್ತೆತಡೆ ನಡೆಸಿ ಸಚಿವ ಪುಟ್ಟರಾಜು ಸಹೋದರನ ಪುತ್ರರ ಮನೆ ಮೇಲಿನ ಐಟಿ ದಾಳಿಯನ್ನು ಖಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News