×
Ad

ಶಿವಮೊಗ್ಗ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆ: ಶಕ್ತಿ ಪ್ರದರ್ಶನ

Update: 2019-03-28 23:25 IST

ಶಿವಮೊಗ್ಗ, ಮಾ. 28: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ಮೂಲಕ ಅಧಿಕೃತವಾಗಿ ಚುನಾವಣಾ ಅಖಾಡಕ್ಕಿಳಿದಿದ್ದಾರೆ. 

ಜಿಲ್ಲಾಧಿಕಾರಿ ಕೆ.ಎ.ದಯಾನಂದ್‍ರವರಿಗೆ ಬಿ.ವೈ.ರಾಘವೇಂದ್ರ ಉಮೇದುವಾರಿಕೆ ಅರ್ಜಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಹಾಗೂ ಪತ್ನಿ ತೇಜಸ್ವಿನಿಯವರು ಉಪಸ್ಥಿತರಿದ್ದರು.

ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಕೆಯು ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಬಿ.ವೈ.ರಾಘವೇಂದ್ರ ಹಾಗೂ ಬಿಜೆಪಿಯ ಮುಖಂಡರು, ರಾಮಣ್ಣ ಶ್ರೇಷ್ಠಿ ಪಾರ್ಕ್ ಆವರಣದಿಂದ ಬೃಹತ್ ಮೆರವಣಿಗೆಯಲ್ಲಿ ತೆರೆದ ಬಸ್‍ನಲ್ಲಿ ಆಗಮಿಸಿದರು. ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ವಿವಿಧೆಡೆಯಿಂದ ವಾಹನಗಳಲ್ಲಿ ಕಾರ್ಯಕರ್ತರನ್ನು ಕರೆತರಲಾಗಿತ್ತು. 

ಗಾಂಧಿಬಜಾರ್, ಶಿವಪ್ಪನಾಯಕ ವೃತ್ತ, ಬಿ.ಹೆಚ್.ರಸ್ತೆ, ಎ.ಎ.ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತದ ಮೂಲಕ ಸಮಾವೇಶ ಆಯೋಜನೆಯಾಗಿದ್ದ ಎನ್.ಇ.ಎಸ್. ಮೈದಾನಕ್ಕೆ ಮೆರವಣಿಗೆ ಆಗಮಿಸಿತು. ಸಭೆ ನಡೆಯುತ್ತಿದ್ದ ವೇಳೆಯೇ ರಾಘವೇಂದ್ರ ಹಾಗೂ ಇತರೆ ನಾಯಕರು ನಾಮಪತ್ರ ಸಲ್ಲಿಸಲು ಡಿಸಿ ಕಚೇರಿಗೆ ಆಗಮಿಸಿದರು. 

ಟೆಂಪಲ್ ರನ್: ಬೆಳಿಗ್ಗೆಯೇ ರಾಘವೇಂದ್ರರವರು ಕುಟುಂಬ ಸದಸ್ಯರೊಂದಿಗೆ, ತಮ್ಮ ಸ್ವಕ್ಷೇತ್ರ ಶಿಕಾರಿಪುರದ ಹುಚ್ಚುರಾಯ ಸ್ವಾಮಿ ದೇವಾಲಯದಲ್ಲಿ, ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಶಿವಮೊಗ್ಗ ನಗರದ ಆಗಮಿಸಿದ ರವೀಂದ್ರ ನಗರದ ಗಣಪತಿ ದೇವಾಲಯದಲ್ಲಿ ಹೋಮ ಕಾರ್ಯದಲ್ಲಿ ಭಾಗಿಯಾದರು. 

ತದನಂತರ ಆದಿಚುಂಚನಗಿರಿ ಮಠಕ್ಕೆ ತೆರಳಿ ಪ್ರಸನ್ನನಾಥ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು. ಹಾಗೆಯೇ ಕೆ.ಎಸ್.ಈಶ್ವರಪ್ಪ ನಿವಾಸಕ್ಕೂ ಭೇಟಿಯಿತ್ತರು. ಈ ವೇಳೆ ಅವರಿಗೆ ಸಹಿಸಿ ತಿನ್ನಿಸಿ ಶುಭ ಹಾರೈಸಲಾಯಿತು. 

ಕಸಿವಿಸಿ: ರವೀಂದ್ರನಗರ ಗಣಪತಿ ದೇವಾಲಯದಲ್ಲಿ ದೇವರ ಮೂರ್ತಿ ಕೆಳಭಾಗದಲ್ಲಿ ನಾಮಪತ್ರದ ಫೈಲ್ ಇಟ್ಟು ಪೂಜೆ ಸಲ್ಲಿಸುವ ವೇಳೆ, ನಾಮಪತ್ರದ ಫೈಲ್ ಕೆಳಕ್ಕೆ ಜಾರಿಬಿದ್ದಿತು. ಇದು ಬಿಜೆಪಿ ಕಾರ್ಯಕರ್ತರಲ್ಲಿ ಕಸಿವಿಸಿ ಉಂಟು ಮಾಡಿತು.  

ಭಾಗವಹಿಸಿದ್ದ ಮುಖಂಡರು: ನಾಮಪತ್ರ ಸಲ್ಲಿಸುವ ಕಾರ್ಯಕ್ಕೆ ಬಿಜೆಪಿ ಪಕ್ಷದ ಹಲವು ರಾಜ್ಯ ಮುಖಂಡರು ಭಾಗವಹಿಸಿದ್ದರು. ಮುಖಂಡರಾದ ಡಿ.ಹೆಚ್.ಶಂಕರಮೂರ್ತಿ, ಎಂ.ಪಿ.ರೇಣುಕಾಚಾರ್ಯ, ಕೋಟಾ ಶ್ರೀನಿವಾಸ ಪೂಜಾರಿ, ಅಬ್ದುಲ್ ಅಝೀಂ, ಎಂ.ಬಿ.ಪುಟ್ಟಸ್ವಾಮಿ, ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಡಾಳು ವಿರೂಪಾಕ್ಷಪ್ಪ, ರಾಜೀವ್ ಸೇರಿದಂತೆ ಸ್ಥಳೀಯ ಬಿಜೆಪಿ ಪಕ್ಷದ ನಾಯಕರು ಉಪಸ್ಥಿತರಿದ್ದರು. 

ಪುತ್ರನ ನಾಮಿನೇಷನ್ ಮಿಸ್ ಮಾಡಿಕೊಂಡ ಯಡಿಯೂರಪ್ಪ
ಈ ಹಿಂದೆ ಬಿ.ವೈ.ರಾಘವೇಂದ್ರ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ನಾಮಪತ್ರ ಸಲ್ಲಿಸುವ ವೇಳೆ, ಅವರ ತಂದೆ ಬಿ.ಎಸ್.ಯಡಿಯೂರಪ್ಪ ಸಕ್ರಿಯವಾಗಿ ಹಾಜರಿರುತ್ತಿದ್ದರು. ಆದರೆ ಈ ಬಾರಿ ಮಾತ್ರ, ರಾಘವೇಂದ್ರ ನಾಮಪತ್ರ ಸಲ್ಲಿಕೆಯ ವೇಳೆ ಬಿ.ಎಸ್.ವೈ ಭಾಗವಹಿಸಲು ಸಾಧ್ಯವಾಗಲಿಲ್ಲ.

ಪೂರ್ವ ನಿಗದಿಯಂತೆ ಬಿಎಸ್ವೈ, ಎಸ್.ಎಂ.ಕೃಷ್ಣ ಮತ್ತಿತರ ನಾಯಕರು ಬೆಂಗಳೂರಿನಿಂದ ಹೆಲಿಕಾಪ್ಟರ್ ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿ, ರಾಘವೇಂದ್ರ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಅದರಂತೆ ಬಿಎಸ್.ವೈ, ಎಸ್.ಎಂ.ಕೃಷ್ಣರವರು ಜಕ್ಕೂರು ವಿಮಾನ ನಿಲ್ದಾಣಕ್ಕೆ ಗುರುವಾರ ಬೆಳಿಗ್ಗೆ ಆಗಮಿಸಿದ್ದಾರೆ. ಆದರೆ ಅವರು ಪ್ರಯಾಣಿಸಬೇಕಾಗಿದ್ದ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಕಾರಣದಿಂದ ಅವರ ಶಿವಮೊಗ್ಗ ಪ್ರಯಾಣ ರದ್ದಾಯಿತು. ಇದರಿಂದ ರಾಘವೇಂದ್ರರವರು ಅಪ್ಪನ ಅನುಪಸ್ಥಿತಿಯಲ್ಲಿಯೇ ನಾಮಪತ್ರ ಸಲ್ಲಿಸುವಂತಾಯಿತು ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡುತ್ತವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News