ಶಿವಮೊಗ್ಗದಲ್ಲಿಯೂ ಐಟಿ ರೈಡ್ !
ಶಿವಮೊಗ್ಗ, ಮಾ. 28: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿಯೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಕುಟುಂಬದ ಸಂಬಂಧಿ ಎನ್ನಲಾದ ವ್ಯಕ್ತಿ ಹಾಗೂ ಶಿವಮೊಗ್ಗ ನಗರದ ಮಾರುತಿ ಕಾರು ಮಾರಾಟದ ಶೋ ರೂಂ ಮಾಲಕರೊಬ್ಬರ ಕಚೇರಿ ಹಾಗೂ ಮನೆಯ ಮೇಲೆ ಗುರುವಾರ ಬೆಳಗ್ಗೆ ದಾಳಿ ನಡೆಸಿ, ತಪಾಸಣೆ ನಡೆಸಿರುವ ಸಂಗತಿ ಬೆಳಕಿಗೆ ಬಂದಿದೆ.
ಶಂಕರಮಠ ರಸ್ತೆಯಲ್ಲಿರುವ ಕಚೇರಿ, ಶೋ ರೂಂ, ಡಿವಿಎಸ್ ಕಾಲೇಜು ಸಮೀಪವಿರುವ ಕಾರಿನ ಶೋ ರೂಂ ಹಾಗೂ ಶರಾವತಿ ನಗರದ ಆದಿಚುಂಚನಗಿರಿ ಮಠದ ಬಳಿಯಿರುವ ಮನೆ ಮೇಲೆ ಐಟಿ ಅಧಿಕಾರಿಗಳ ಪ್ರತ್ಯೇಕ ತಂಡಗಳು ಏಕಕಾಲಕ್ಕೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಐಟಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ ವೇಳೆ ಕಚೇರಿ ಹಾಗೂ ಶೋರೂಂಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಹೊರ ಕಳುಹಿಸಿ ವಿವಿಧ ದಾಖಲೆ ಪತ್ರಗಳು ಹಾಗೂ ಹಣಕಾಸಿನ ವಹಿವಾಟಿನ ವಿವರಗಳನ್ನು ತಂಡ ಪರಿಶೀಲನೆ ನಡೆಸಿದೆ ಎನ್ನಲಾಗಿದ್ದು, ಶೋ ರೂಂ ಮಾಲಕರು, ಕಚೇರಿಯ ಮುಖ್ಯಸ್ಥರಿಂದಲೂ ಐಟಿ ತಂಡ ಮಾಹಿತಿ ಕಲೆ ಹಾಕಿದೆ ಎಂದು ತಿಳಿದುಬಂದಿದೆ.
ದಾಳಿಯ ವೇಳೆ ಪತ್ತೆಯಾದ ದಾಖಲೆ, ಹಣಕಾಸು ಮತ್ತಿತರ ವಿವರಗಳ ಬಗ್ಗೆ ಐಟಿ ಇಲಾಖೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.