ಹಾಸಿಗೆಯಲ್ಲಿ ಸುಮ್ಮನೆ ಮಲಗಿಕೊಂಡಿರಲು 19000 ಡಾಲರ್ ಪಾವತಿ !

Update: 2019-03-29 06:35 GMT

ವಾಷಿಂಗ್ಟನ್ : ಪ್ರತಿ ದಿನ ಬೆಳಗ್ಗೆ ಆಲಸ್ಯದಿಂದ ಹಾಸಿಗೆಯಿಂದ ಎದ್ದೇಳಲು ಕಷ್ಟ ಪಡುವವರು ನೀವಾಗಿದ್ದರೆ, ಈ ಕೆಲಸ ನಿಮಗೆ ಅತ್ಯಂತ ಸೂಕ್ತವೆಂದೇ ಹೇಳಬಹುದು. 

ಬರೋಬ್ಬರಿ 60 ದಿನ ಹಾಸಿಗೆಯಲ್ಲಿಯೇ ಮಲಗಿಕೊಳ್ಳಲು ಸಿದ್ಧರಾಗಿರುವ ಮಹಿಳೆಯರಿಗಾಗಿ ವಿಜ್ಞಾನಿಗಳು ಹುಡುಕುತ್ತಿದ್ದು ಹಗುರವಾಗಿರುವುದರಿಂದ ಮಾನವ ದೇಹದ ಮೇಲೆ ಯಾವ ಪರಿಣಾಮ ಬೀರುವುದೆಂದು ತಿಳಿಯಲು ಈ ಮೂಲಕ ಅವರು ಪ್ರಯತ್ನಿಸಲಿದ್ದಾರೆ. ಈ ಅಧ್ಯಯನದಲ್ಲಿ ಭಾಗಿಯಾಗುವವರಿಗೆ 16,500 ಯುರೋ ಅಥವಾ ಸುಮಾರು 18,522 ಡಾಲರ್ ಪಾವತಿ ಮಾಡಲಾಗುವುದು.

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿರುವಾಗ ಮೈಕ್ರೋಗ್ರಾವಿಟಿಯಿಂದ ದೇಹ ಹಗುರವಾಗುವುದರಿಂದ ಅವರ ದೇಹದಲ್ಲಿ ಬದಲಾವಣೆಗಳಾಗುತ್ತದೆ. ಬಾಹ್ಯಾಕಾಶದಲ್ಲಿ  ಕಡಿಮೆ ದೈಹಿಕ  ಒತ್ತಡದಿಂದ ಸ್ನಾಯುಗಳು ಹಾಗೂ ಮೂಳೆಗಳ ಮೇಲೆ ಪರಿಣಾಮ ಬೀರಿ ದೇಹದ ದ್ರವಗಳು ತಲೆಯತ್ತ ಸಾಗುತ್ತವೆ ಎಂದು ಈ ಅಧ್ಯಯನ ನಡೆಸಲು ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜನ್ಸಿಯಿಂದ ನಿಯೋಜಿಸಲ್ಪಟ್ಟ  ಜರ್ಮನ್ ಏರೋಸ್ಪೇಸ್ ಸೆಂಟರ್ ತಿಳಿಸಿದೆ.

ಈ ರೀತಿ ಸದಾ ಬೆಡ್ ರೆಸ್ಟ್ ನಲ್ಲಿರುವ ವ್ಯಕ್ತಿಗಳ ಮೇಲೆ ಅಧ್ಯಯನ ನಡೆಸಿ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಹಗುರವಾಗುವಿಕೆಯಿಂದ ಸದಾ ವ್ಯಾಯಾಮದಲ್ಲೇ ಮುಳುಗುವುದನ್ನು ತಪ್ಪಿಸುವ ಬಗೆಯನ್ನು ಯೋಚಿಸಲಾಗುವುದು.

ಸಂಶೋಧಕರು ಈಗಾಗಲೇ ಶಾರ್ಟ್ ಆರ್ಮ್ ಹ್ಯೂಮನ್ ಸೆಂಟ್ರಿಫ್ಯೂಜ್ ಎಂಬ ಕೃತಕ ಗುರುತ್ವಾಕರ್ಷಣಾ ಶಕ್ತಿಯಿರುವ ಸಾಧನ ಸೃಷ್ಟಿಸಿದ್ದು ಇದು ದೇಹ ದ್ರವಗಳ ಸಮತೋಲಿತ ವಿತರಣೆಗೆ ಸಹಕಾರಿಯಾಗುವುದು. ಈ ಸಾಧನವನ್ನು ಈ ಅಧ್ಯಯನದ ಭಾಗವಾಗುವ ಮೂರನೇ ಎರಡರಷ್ಟು ಮಂದಿಯ ಮೇಲೆ ಪ್ರಯೋಗಿಸುವ ಉದ್ದೇಶ ವಿಜ್ಞಾನಿಗಳದ್ದು.

ಈ ಬೆಡ್ ರೆಸ್ಟ್ ಅಧ್ಯಯನದಲ್ಲಿ ಭಾಗಿಯಾಗುವವರು  ಆಹಾರ ಸೇವನೆ, ಸ್ನಾನ, ಶೌಚಾಲಯ ಉಪಯೋಗಿಸುವುದು ಎಲ್ಲವೂ ಮಲಗಿದಲ್ಲಿಯೇ ಮಾಡಬೇಕಿದೆ. ಪ್ರತಿಯೊಬ್ಬರಿಗೂ ಒಂದು ಖಾಸಗಿ ಕೋಣೆ ಒದಗಿಸಲಾಗುವುದು ಹಾಗೂ ಹಾಸಿಗೆಯನ್ನು ಆರು ಡಿಗ್ರಿ ಕೋನದಲ್ಲಿರಿಸಲಾಗುವುದು ಹಾಗೂ ತಲೆಯ ಭಾಗ ಸ್ವಲ್ಪ ಕೆಳಕ್ಕಿರುವುದು.

ಪೌಷ್ಠಿಕಾಂಶ ತಜ್ಞರ ತಂಡ ಅಧ್ಯಯನದಲ್ಲಿ ಭಾಗಿಯಾಗುವವರು ಏನು ತಿನ್ನಬೇಕೆಂದು ನಿರ್ಧರಿಸಿ ಅವರ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲಿದ್ದಾರೆ.  ಭಾಗವಹಿಸುವವರಿಗೆ ನೀಡಲಾಗುವ ಆಹಾರ ಅತಿಯಾಗಿ ಆರೋಗ್ಯಯುತ ಆಹಾರ ಎನ್ನಲಾಗದು ಕೆಲವೊಮ್ಮೆ ಕೇಕುಗಳು ಅಥವಾ ಸಿಹಿತಿಂಡಿಗಳನ್ನು ನೀಡಬಹುದು ಎಂದು ಜರ್ಮನ್ ಏರೋಸ್ಪೇಸ್ ಸೆಂಟರ್ ವೆಬ್ ಸೈಟ್ ಹೇಳಿದೆ.

ಈ ಅಧ್ಯಯನ ಎರಡು ಹಂತಗಳಲ್ಲಿ ನಡೆಯಲಿದ್ದು  24 ಮಂದಿಯ ( 12 ಮಂದಿ ಪುರುಷರು ಹಾಗೂ 12 ಮಂದಿ ಮಹಿಳೆಯರು) ಮೊದಲ ತಂಡ ಮಂಗಳವಾರದಿಂದ ಅಧ್ಯಯನದಲ್ಲಿ ಭಾಗಿಯಾಗಿದೆ. ಮುಂದಿನ ಹಂತಕ್ಕೆ ಎಷ್ಟು ಮಂದಿ ಅಗತ್ಯ ಇದ್ದಾರೆಂದು ತಿಳಿದು ಬಂದಿಲ್ಲ. ಈ ಹಂತದ ಅಧ್ಯಯನ ಜರ್ಮನಿಯ ಕೊಲೋನ್ ಎಂಬಲ್ಲಿರುವ ಜರ್ಮನ್ ಏರೋಸ್ಪೇಸ್ ಸೆಂಟರ್ ನ ಇನ್‍ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಇಲ್ಲಿ ಸೆಪ್ಟೆಂಬರ್ ನಿಂದ ಡಿಸೆಂಬರ್  2019ರ ತನಕ ನಡೆಯಲಿದೆ.

ಇದಕ್ಕಾಗಿ 24ರಿಂದ 55 ವರ್ಷ ವಯೋಮಿತಿಯ ಆರೋಗ್ಯವಂತ ಮಹಿಳೆಯರ ಅಗತ್ಯವಿದ್ದು ಮಹಿಳೆಯರು ಜರ್ಮನ್ ಭಾಷೆ ಮಾತನಾಡಬಲ್ಲವರಾಗಿರ ಬೇಕು. 2017ರಲ್ಲಿ ನಾಸಾ ಇಂತಹುದೇ ಬೆಡ್ ರೆಸ್ಟ್ ಅಧ್ಯಯನ ನಡೆಸಿದ್ದು 11 ಜನರು ಅದಕ್ಕಾಗಿ 30 ದಿನ ಹಾಸಿಗೆಯಲ್ಲಿಯೇ ಕಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News