ಮೋದಿ ಮಹಾನ್ ನಾಟಕಕಾರ, ಸುಳ್ಳು ಹೇಳುವ ಪ್ರಧಾನಿ: ಸಿದ್ದರಾಮಯ್ಯ
ಸೂರು,ಮಾ.29: ಪ್ರಧಾನಿ ನರೇಂದ್ರ ಮೋದಿ ಮಹಾನ್ ನಾಟಕಕಾರ, ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ನನ್ನ 50 ವರ್ಷಗಳ ರಾಜಕೀಯ ಇತಿಹಾಸದಲ್ಲಿ ನೋಡಿಯೇ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದ ಕಲ್ಯಾಣಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೋದಿ ಮಹಾನ್ ನಾಟಕಕಾರ, ಹಾಗೆಯೇ ಕಲಾಕಾರ ಕೂಡ. ಕಳೆದ ಐದು ವರ್ಷದಲ್ಲಿ ಬರೀ ಸುಳ್ಳುಗಳನ್ನೇ ಹೇಳಿ ಕಾಲ ಕಳೆ ಪ್ರಧಾನಿ ಎಂದರೆ ಮೋದಿ, ಮನ್ ಕಿ ಬಾತ್, ಅಚ್ಚೇದಿನ್ ಎಂದು ಹೇಳಿಕೊಂಡು ಜನರನ್ನು ನಂಬಿಸಿದರು. ಆದರೆ ಇದುವರೆಗೆ ಯಾವ ಅಚ್ಚೇದಿನ್ ಕೂಡ ಬರಲಿಲ್ಲ. ಇನ್ನು ಈಗ ಚೌಕೀದಾರ್ ಎಂದು ಹೇಳಿಕೊಂಡು ತಿರುಗುತಿದ್ದಾರೆ. ಅಂಬಾನಿ, ಅದಾನಿ, ವಿಜಯ ಮಲ್ಯರಿಗೆ ಚೌಕಿದಾರ ಎಂದು ಟೀಕಿಸಿದರು.
ಮೋದಿ ಯಾವ ರೀತಿ ನಾಟಕ ಮಾಡಿಕೊಂಡು ಸುಳ್ಳುಗಳನ್ನು ಹೇಳುತಿದ್ದಾರೋ ಅದೇ ಮಾದರಿಯಲ್ಲಿ ಸಂಸದ ಪ್ರತಾಪ್ ಸಿಂಹ ನಡೆಯುತ್ತಿದ್ದಾನೆ. ನಮ್ಮ ಅವಧಿಯಲ್ಲಿ ಮಾಡಿರುವ ಕೆಲಸಗಳನ್ನು ನಾನೇ ಮಾಡಿರುವುದು ಎಂದು ಹೇಳಿಕೊಂಡು ಪುಸ್ತಕದಲ್ಲಿ ಬರೆದು ಕೊಂಡು ಹಂಚುತ್ತಿದ್ದಾನೆ. ಈತನ ಸುಳ್ಳುಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರುಗಳು ಜನರಿಗೆ ತಿಳಿಸಬೇಕು ಎಂದು ಕರೆ ನೀಡಿದರು.
ಕೋಮುವಾದಿ ಶಕ್ತಿಗಳನ್ನು ಯಾವುದೇ ಕಾರಣಕ್ಕೂ ಬೆಳೆಯಲು ಬಿಡಬಾರದು. ಇವರಿಗೆ ಮತ್ತೊಮ್ಮೆ ಅಧಿಕಾರ ನೀಡಿದರೆ ದೇಶಕ್ಕೆ ಮತ್ತು ಸಮಾಜಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಜೊತೆಗೆ ಅಂಬೇಡ್ಕರ್ ಕೊಟ್ಟ ಸಂವಿಧಾನ ಉಳಿಯುವುದಿಲ್ಲ ಎಂದು ಲೇವಡಿ ಮಾಡಿದರು.
ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ದೇಶದಲ್ಲಿ ಮತ್ತೆ ಚುನಾವಣೆ ಬರುತ್ತದೆ ಎಂಬ ನಂಬಿಕೆಯಿಲ್ಲ. ಯಾಕೆಂದರೆ ಇವರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲ. ಆರೆಸ್ಸೆಸ್ ಸಂಚಾಲಕ ಮೋಹನ್ ಭಾಗವತ್ ಒಂದು ಕಡೆ ಮೀಸಲಾತಿ ಹೋಗಬೇಕು ಎಂದರೆ, ಮತ್ತೊಂದೆಡೆ ಆರೆಸ್ಸೆಸ್ ಕಾರ್ಯದರ್ಶಿ ಸುರೇಶ್ ಜೋಶಿ ಸಂವಿಧಾನದಿಂದ ಹಿಂದೂ ಆಚರಣೆಗಳಿಗೆ ಅವಕಾಶವಿಲ್ಲ ಹಾಗಾಗಿ ಸಂವಿಧಾನ ಬದಲಾಗಬೇಕು ಎನ್ನುತ್ತಾರೆ, ಇನ್ನು, ಅನಂತಕುಮಾರ್ ಹೆಗಡೆ ಎನ್ನುವ ಮತಾಂಧ ಸಂವಿಧಾನ ಬದಲಾವಣೆ ಮಾಡುವುದಕ್ಕೆ ನಾವು ಬಂದಿರುವುದು ಎನ್ನುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಲು ದೇಶಾದ್ಯಂತ ಜಾತ್ಯಾತೀ ಪಕ್ಷಗಳು ಒಂದಾಗುತ್ತಿವೆ. ಆ ನಿಟ್ಟಿನಲ್ಲಿ ಕರ್ನಾಟಕದಲ್ಲೂ ಸಹ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಪಕ್ಷಗಳು ಮತ್ತು ಆ ರಾಜ್ಯಕ್ಕೆ ಸಂಬಂಧ ಪಟ್ಟಹಾಗಿ ಘಟಬಂಧನ್ ಮಾಡಿಕೊಂಡಿವೆ. ಜಾತ್ಯಾತೀತ ಪಕ್ಷಗಳು ಆಯಾ ರಾಜ್ಯದ ರಾಜಕೀಯ ಸನ್ನಿವೇಶಕ್ಕನುಗುಣವಾಗಿ ಹೊಂದಾಣಿಕೆ ಮಾಡಿಕೊಂಡಿವೆ. ಇವೆಲ್ಲದರ ಉದ್ದೇಶ ಕೋಮುವಾದಿ ಬಿಜೆಪಿಯನ್ನು ದೂರ ಇಡುವುದು ಎಂದು ಹೇಳಿದರು.
ಹಳೆಯದನ್ನೆಲ್ಲ ಮರೆತು ಒಂದಾಗಿ: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕೀಯವಾಗಿ ಹೋರಾಟಗಳನ್ನು ಮಾಡಿಕೊಂಡು ಬಂದಿವೆ. ನಮ್ಮ ಉದ್ದೇಶ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಬೇಕು ಎಂಬುದು. ಆ ಕಾರಣಕ್ಕೆ ನಾವು ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ದಿನವೇ ಹೊಂದಾಣಿಕೆ ಮಾಡಿಕೊಂಡೆವು. ಅದೇ ರೀತಿ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡುತ್ತಿದ್ದೇವೆ. ನಮ್ಮಲ್ಲಿ ನಡೆದಿರುವ ಹಳೆಯ ಎಲ್ಲಾ ವಿಚಾರಗಳನ್ನು ಮರೆತು ಕಾರ್ಯಕರ್ತರು ಒಂದಾಗಿ ದುಡಿಯಬೇಕು ಎಂದು ಸಿದ್ದರಾಮಯ್ಯ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಮಾಜಿ ಶಾಸಕರುಗಳಾ ವಾಸು, ಎಂ.ಕೆ.ಸೋಮಶೇಖರ್, ಮೇಯರ್ ಪುಷ್ಪಲತಾ ಜಗನ್ನಾಥ್, ಕೆಪಿಸಿಸಿ ಸದಸ್ಯ ಅಕ್ಬರ್ ಅಲೀಂ, ಮಾಜಿ ಮೇಯರ್ ಗಳಾದ ಆರೀಫ್ ಹುಸೇನ್, ನಾರಾಯಾಣ, ಅನಂತು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಜೆಡಿಎಸ್ ಮುಖಂಡರಾದ ಆರ್.ಲಿಂಗಪ್ಪ, ಕೆ.ವಿ.ಮಲ್ಲೇಶ್, ವಾಸು, ಕಾಂಗ್ರೆಸ್ ಮುಖಂಡರಾದ ಈಶ್ವರ್ ಚಿಕ್ಕಡಿ, ಕೆ.ಹರೀಶ್‍ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಂಗ್ರೆಸ್-ಜೆಡಿಎಸ್ ಮುಂದಿರುವ ಗುರಿ ಬಿಜೆಪಿ ಸೋಲಿಸುವುದು. ನಮ್ಮಲ್ಲಿ ನಡೆದಿರುವ ಬೇರೆ ಎಲ್ಲಾ ವಿಚಾರಗಳು ಗೌಣ, ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಬಿಪ್ರಾಯಗಳಿದ್ದರೂ ನಮ್ಮ ಎದುರಾಳಿ ಬಿಜೆಪಿ ಸೋಲಿಸುದೇ ನಮ್ಮ ಮುಂದಿರುವ ಸವಾಲು.
-ಸಿದ್ದರಾಮಯ್ಯ, ಮಾಜಿ ಸಿಎಂ
ಕಾಂಗ್ರೆಸ್-ಜೆಡಿಎಸ್ ಒಂದಾದರೆ ಕೋಮು ಶಕ್ತಿಗಳನ್ನು ತಡೆಗಟ್ಟಬಹುದು, ಸಿ.ಎಚ್.ವಿಜಯಶಂಕರ್ ಒಬ್ಬ ಉತ್ತಮ ಅಭ್ಯರ್ಥಿ, ಎರಡೂ ಪಕ್ಷಗಳ ಮುಖಂಡರು ಕಾರ್ಯಕರ್ತರು ವೈಯಕ್ತಿಕ ವಿಚಾರ ದ್ವೇಷ ಮರೆತು ಈ ಅಭ್ಯರ್ಥಿಗೆ ಬೆಂಬಲ ನೀಡಿ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅನುಷ್ಠಾನಗೊಳಿಸಿದ ಅನೇಕ ಯೋಜನೆಗಳನ್ನು ಅಭಿವೃದ್ಧಿಗೊಳಿಸಿದೆ. ಆದರೆ ಈ ಕೆಲಸಗಳನ್ನು ಬಿಜೆಪಿ ಮಾಡಿದ್ದು ಎಂದು ಹೇಳುತ್ತಿದೆ. ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಬೇಕು.
-ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ.