"ಕೆಜಿಎಫ್ ಪ್ರಸಾರದ ವೇಳೆ ವಿದ್ಯುತ್ ಕಟ್ ಆದರೆ ಮೆಸ್ಕಾಂ ಕಚೇರಿಯಲ್ಲಿ ಬಾಂಬ್ ಸ್ಫೋಟ"

Update: 2019-03-29 14:13 GMT

ಶಿವಮೊಗ್ಗ, ಮಾ. 29: ಯಶ್ ನಟನೆಯ ಕೆಜಿಎಫ್ ಚಿತ್ರ ಮಾ.30 ರಂದು ಟಿ.ವಿ ಯಲ್ಲಿ ಪ್ರಸಾರವಾಗುತ್ತಿದ್ದು, ಆ ವೇಳೆ ಭದ್ರಾವತಿಯಲ್ಲಿ ಏನಾದರೂ ವಿದ್ಯುತ್ ಕಡಿತಗೊಳಿಸಿದರೆ ಮೆಸ್ಕಾಂ ಕಚೇರಿಗೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವ ಕೈಬರಹದ ಸಂದೇಶವಿರುವ ಪೋಸ್ಟ್ ಕಾರ್ಡ್‍ವೊಂದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಭದ್ರಾವತಿ ಎಕ್ಸಿಕ್ಯೂಟಿವ್ ಎಂಜಿನಿಯರ್ ರವರಿಗೆ ಈ ಪತ್ರ ಬರೆಯಲಾಗಿದೆ. ಆದರೆ ಪತ್ರ ಬರೆದಿರುವ ವ್ಯಕ್ತಿಯ ವಿವರಗಳು ಪೋಸ್ಟ್ ಕಾರ್ಡ್‍ನಲ್ಲಿ ನಮೂದಿಸಿಲ್ಲ. ಆದರೆ ಸಂದೇಶದ ಅಂತ್ಯದಲ್ಲಿ, 'ಪ್ರಜ್ಞಾ ನಾಗರಿಕ', 'ಬಿಜೆಪಿ ಕಾರ್ಯಕರ್ತ' ಎಂದು ಬರೆದಿರುವುದು ಕಂಡುಬಂದಿದೆ. 

ಪತ್ರದಲ್ಲೇನಿದೆ?: ಎಚ್ಚರಿಕೆ ಎಂಬ ತಲೆಬರಹದಡಿ ಈ ಪತ್ರ ಬರೆಯಲಾಗಿದೆ. 'ಈ ಮೂಲಕ ಕೆಇಬಿ, ಮೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಸುವುದೇನೆಂದರೆ ಮಾ.30 ರಂದು ಶನಿವಾರ ಭದ್ರಾವತಿಯಲ್ಲಿ ಕರೆಂಟ್ ಏನಾದರೂ ತೆಗೆದರೆ, ನೀವೂ ಇರಲ್ಲ. ನಿಮ್ಮ ಆಫೀಸ್ ಕೂಡಾ ಇರಲ್ಲ. ಸುಟ್ಟು ಭಸ್ಮ ಮಾಡುತ್ತೇವೆ. 

ಹಾಗೆಯೇ 30/3/2019 ರ ಶನಿವಾರ ಸಂಜೆ ಯಶ್ ಅಭಿನಯದ ಕೆಜಿಎಫ್ ಚಲನಚಿತ್ರ ಟಿವಿಯಲ್ಲಿ ಪ್ರಸಾರವಾಗುತ್ತದೆ. ನೀವು ರಾಜಕೀಯ ಪುಡಾರಿಗಳ, ಹೆಚ್.ಡಿ.ಕುಮಾರಸ್ವಾಮಿ, ಅಪ್ಪಾಜಿಗೌಡ ಇವರ ಕುಮ್ಮಕ್ಕಿನಿಂದ ಕರೆಂಟ್ ತೆಗೆದರೆ ನಿಮ್ಮ ಆಫೀಸ್‍ಗೆ ಸರಿಯಾದ ಬಾಂಬ್ ಇಡುತ್ತೇವೆ. ಅದಕ್ಕಾಗಿ ಶಿವಮೊಗ್ಗ ಎಂ.ಆರ್.ಎಸ್/ಕೆಇಬಿ ಆಫೀಸ್‍ಗೂ ಎಚ್ಚರಿಸಿದ್ದೇವೆ. 30ರಂದು ಶನಿವಾರ ಸಂಜೆ ಏನಾದರೂ ಮಿಸ್ ಆಗಿ ಕರೆಂಟ್ ಹೋದರೆ ನಿಮ್ಮ ಜೀವ ಹೋಗುತ್ತೆ. ಎಚ್ಚರಿಕೆ, ಎಚ್ಚರಿಕೆ. ಇದರಲ್ಲಿ ರಾಜಕೀಯ ಬೇಡ. ಇಂತಿ, ಪ್ರಜ್ಞಾ ನಾಗರಿಕ. ಬಿಜೆಪಿಯ ಕಾರ್ಯಕರ್ತ...' ಎಂದು ಬರೆಯಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News