ಐಟಿ ದಾಳಿ: ಇಡೀ ದಿನದ ತಪಾಸಣೆಯಲ್ಲಿ ಸಚಿವ ಪುಟ್ಟರಾಜು ಸಂಬಂಧಿಯ ಮನೆಯಲ್ಲಿ ಸಿಕ್ಕಿದ್ದು 36,700 ರೂ.!
ಪಾಂಡವಪುರ,ಮಾ.29: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಪ್ತರಾದ ಸಣ್ಣ ನೀರಾವರಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅಣ್ಣನ ಮಗನಾದ ಜಿ.ಪಂ ಸದಸ್ಯ ಸಿ.ಅಶೋಕ್ ಅವರ ಚಿನಕುರಳಿ ಗ್ರಾಮದಲ್ಲಿರುವ ಮನೆ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು (ಆದಾಯ ಮತ್ತು ತೆರಿಗೆ ಇಲಾಖೆ) ದಾಳಿ ನಡೆಸಿ ದಾಖಲೆ ಪತ್ರಗಳನ್ನು ತಪಾಸಣೆ ನಡೆಸಿದ ವೇಳೆ 36,700ರೂ.ನಗದು ಸಿಕ್ಕಿದ್ದು, ಅದನ್ನು ಪರಿಶೀಲಿಸಿದ ಐಟಿ ಅಧಿಕಾರಿಗಳು ಮತ್ತೇ ಅಶೋಕ್‍ಗೆ ವಾಪಸ್ ನೀಡಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇರೆಗೆ ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಇಡೀ ದಿನ ಸಿ.ಅಶೋಕ್ ಅವರ ಮನೆಯಲಿದ್ದ ಲೆಕ್ಕ ಪತ್ರಗಳು, ದಾಖಲಾತಿಗಳು ಹಾಗೂ ಕೆಲವು ಕಡತಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಅಶೋಕ್, ಪತ್ನಿ ವಿಜಯ, ಪುತ್ರ ಹಾಗೂ ಅಶೋಕ್ ಅವರ ತಾಯಿ ಹಾಜರಿದ್ದರಾದರೂ ಅಶೋಕ್ ಅವರನ್ನು ಹೊರತುಪಡಿಸಿದಂತೆ ಬೇರೆ ಯಾರನ್ನೂ ಐಟಿ ಅಧಿಕಾರಿಗಳು ಪ್ರಶ್ನೆ ಮಾಡಿಲ್ಲ ಎನ್ನಲಾಗಿದೆ.
ಸಿಆರ್‍ಪಿಎಫ್ ಸಿಬ್ಬಂದಿಗಳ ಭದ್ರತೆಯೊಂದಿಗೆ 4 ಕಾರುಗಳಲ್ಲಿ ಬಂದ 8 ಮಂದಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಇಡೀ ದಿನ ಅಂದರೆ ಸುಮಾರು 15 ಗಂಟೆಗಳ ಸತತವಾಗಿ ಅಶೋಕ್ ವ್ಯವಹಾರದ ಬಗ್ಗೆ ಸಂಪೂರ್ಣ ತಪಾಸಣೆ ನಡೆಸಿ ಮನೆಯನ್ನೂ ಸಂಪೂರ್ಣ ಪರಿಶೀಲನೆ ನಡೆಸಿದರು. ಮನೆಯಲ್ಲಿ 5 ಕೊಠಡಿಗಳಿದ್ದು, ಮನೆಯ ಗ್ರೌಂಡ್ ಪ್ಲೋರ್ ನಲ್ಲಿ ಕಚೇರಿ ಇದೆ. ಎಲ್ಲವನ್ನೂ ಐಟಿ ಅಧಿಕಾರಿಗಳು ಪರಿಶೀಲಿಸಿ, ಬುಧವಾರ ಬೆಳಗ್ಗೆ 5.10ಕ್ಕೆ ತಪಾಸಣೆ ಪ್ರಾರಂಭಿಸಿ ರಾತ್ರಿ 8.10ಕ್ಕೆ ವಿಚಾರಣೆ ಅಂತ್ಯಗೊಳಿಸಿ ನಂತರ ಮನೆಯಿಂದ ವಾಪಸ್ಸಾದರು. ಇದೇ ವೇಳೆ ಮೈಸೂರಿನ ವಿಜಯನಗರದ ಮೂರನೇ ಹಂತದಲ್ಲಿರುವ ಸಿ.ಶಿವಕುಮಾರ್ ಅವರ ಮನೆಯ ಮೇಲೂ ದಾಳಿ ನಡೆಸಿದ ಐಟಿ ಅಧಿಕಾರಿಗಳು ಕಡತಗಳ ತಪಾಸಣೆ ನಡೆಸಿದರು.
ಈ ವೇಳೆ ಅಶೋಕ್ ಪತ್ನಿ ವಿಜಯ ಸುದ್ದಿಗಾರರೊಂದಿಗೆ ಮಾತನಾಡಿ, ಐಟಿ ಅಧಿಕಾರಿಗಳು ನಮ್ಮನ್ನೇನೂ ಪ್ರಶ್ನೆ ಮಾಡಿಲ್ಲ. ಅಶೋಕ್ ಅವರಲ್ಲಿ ಕೆಲವು ಪ್ರಶ್ನೆ ಕೇಳಿದರು. ದಾಳಿ ಬಗ್ಗೆ ಅಶೋಕ್ ಅವರೇ ಎಲ್ಲವನ್ನೂ ಅಧಿಕಾರಿಗಳಿಗೆ ವಿವರಿಸಿದ್ದಾರೆ. ನಾನೇನು ಭಯ ಪಡಲಿಲ್ಲ. ಜತೆಗೆ ಈ ವಿಚಾರದಲ್ಲಿ ಡಿಪ್ರೆಸ್ ಆಗಿಲ್ಲ ಎಂದರು.
ಏನೂ ಸಿಕ್ಕಿಲ್ಲ: ಐಟಿ ದಾಳಿ ವೇಳೆ ಏನೂ ಸಿಕ್ಕಿಲ್ಲ. 36,700 ನಗದು ಸಿಕ್ಕಿತ್ತು. ಪರಿಶೀಲಿಸಿ ವಾಪಸ್ ನನಗೇ ನೀಡಿದ್ದಾರೆ ಎಂದು ಸಚಿವ ಸಿ.ಎಸ್.ಪುಟ್ಟರಾಜು ಅಣ್ಣನ ಪುತ್ರ ಸಿ.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಜತೆಗೆ ನನ್ನ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ನನ್ನ ಪತ್ನಿ, ತಾಯಿ ಹಾಗೂ ಸಂಬಂಧಿಕರ ಬಗ್ಗೆ ವಿಚಾರಿಸಿದರು. ಮನೆಯನ್ನೂ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ವಿಚಾರಣೆಗೆ ಮೈಸೂರಿಗೆ ಬರಲು ಹೇಳಿದ್ದಾರೆ ಎಂದರು.
ಐಟಿ ಅಧಿಕಾರಿಗಳು ತೆಗೆದುಕೊಂಡು ಹೋದ ಶೂಟ್‍ಕೇಸ್‍ನಲ್ಲಿ ಅವರದ್ದೇ ವಸ್ತುಗಳಿದ್ದವು. ನಮ್ಮದೇನು ಇರಲಿಲ್ಲ. ಕೇವಲ ನಾವು ಆದಾಯ ತೆರಿಗೆ ಪಾವತಿ ಮಾಡಿರುವ ಮಾಡಿರುವ ಪತ್ರಗಳನ್ನಷ್ಟೇ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.
ಐಟಿ ದಾಳಿಯನ್ನು ಚುನಾವಣೆಗೂ ಮೊದಲು ದಾಳಿ ಮಾಡಬಹುದಿತ್ತು. ಅಥವಾ ಚುನಾವಣೆ ನಂತರ ಮಾಡಬಹುದಿತ್ತು. ಈಗ ಚುನಾವಣೆ ಹತ್ತಿರ ಮಾಡಿದ್ದು ರಾಜಕೀಯ ಪ್ರೇರಿತವಲ್ಲದೇ ಮತ್ತೇನು ಎಂದು ಪ್ರಶ್ನಿಸಿದ ಸಿ.ಅಶೋಕ್, ಪ್ರಧಾನಿ ಮೋದಿ ಹಾಗೂ ಬಿಜೆಪಿಯವರ ಕುತಂತ್ರ ಮಂಡ್ಯದಲ್ಲಿ ನಡೆಯಲ್ಲ ಎಂದು ಹೇಳಿದರು.