ತೇಜಸ್ವಿನಿ ಅನಂತಕುಮಾರ್‌ಗಿಲ್ಲದ ಅನುಕಂಪ ಸುಮಲತಾಗೇಕೆ? ಬಿಜೆಪಿ ನಾಯಕರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನೆ

Update: 2019-03-29 17:01 GMT

ಬೆಳಗಾವಿ, ಮಾ.29: ಬಿಜೆಪಿ ನಾಯಕರು ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಬಗ್ಗೆ ತೋರಿಸದ ಅನುಕಂಪವನ್ನು ಸುಮಲತಾ ಅಂಬರೀಷ್‌ಗೇಕೆ ತೋರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಅಪಾರ ಶ್ರಮವಹಿಸಿದ ಅನಂತಕುಮಾರ್ ಈಗಿಲ್ಲ. ಅವರ ಪತ್ನಿ ತೇಜಸ್ವಿನಿ ಪರವಾಗಿ ಅನುಕಂಪದ ಅಲೆ ಇದ್ದಾಗಲೂ ಯಾವ ಕಾರಣಕ್ಕಾಗಿ ಬಿಜೆಪಿ ಟಿಕೆಟ್ ಕೈ ತಪ್ಪಿದೆ? ಮತ್ತೊಂದೆಡೆ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಷ್ ವಿರುದ್ಧ ಅಭ್ಯರ್ಥಿಯನ್ನು ಹಾಕದೇ, ಅವರ ಬಗ್ಗೆ ಬಿಜೆಪಿಯವರು ಅನುಕಂಪ ವ್ಯಕ್ತಪಡಿಸುತ್ತಿರುವುದೇಕೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದರು.

ಸಮ್ಮಿಶ್ರ ಸರಕಾರದಲ್ಲಿ ಮೈತ್ರಿ ಧರ್ಮವನ್ನು ಪಾಲಿಸಲು ಕಾಂಗ್ರೆಸ್ ಪಕ್ಷವು, ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಸುಮಲತಾ ಅವರಿಗೆ ಬೇರೆ ಯಾವುದಾದರೂ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಂತೆ ರಾಜ್ಯ ನಾಯಕರು ಸೂಚಿಸಿದ್ದರು. ಆದರೆ, ಅದನ್ನು ಧಿಕ್ಕರಿಸಿ, ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಅವರು ಹೇಳಿದರು.

ಹೈಕಮಾಂಡ್ ತೀರ್ಮಾನ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರಮೇಶ್ ಕತ್ತಿ, ಕಾಂಗ್ರೆಸ್ ಪಕ್ಷಕ್ಕೆ ಬರುವುದಾದರೆ ಅವರನ್ನು ಸ್ವಾಗತಿಸುತ್ತೇನೆ. ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು. ಯಾರನ್ನು ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಬಿಜೆಪಿಯವರು ಬಿಂಬಿಸುತ್ತಿರುವಂತೆ ನರೇಂದ್ರಮೋದಿ ಅಲೆ ದೇಶದಲ್ಲಿ ಎಲ್ಲಿಯೂ ಇಲ್ಲ. ದೇಶಿಯ ಕ್ಷಿಪಣಿಯಿಂದ ಉಪಗ್ರಹವನ್ನು ಧ್ವಂಸಗೊಳಿಸಿದ ಪ್ರಯೋಗದ ಯಶಸ್ಸು, ವಿಜ್ಞಾನಿಗಳಿಗೆ ಸಲ್ಲಬೇಕು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಇಸ್ರೋ ಸ್ಥಾಪನೆ ಮಾಡಿದ್ದನ್ನು ಬಿಜೆಪಿಯವರು ಮರೆತಂತಿದೆ ಎಂದು ಅವರು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News