ಕೆಪಿಸಿಸಿ ಅಧ್ಯಕ್ಷ, ದೇಶಪಾಂಡೆ ವಿರುದ್ಧ ಜಾಲತಾಣದಲ್ಲಿ ಅವಹೇಳನ: ಕೆಪಿಸಿಸಿ ಮುಖಂಡ ಇಮ್ರಾನ್ ಕಳ್ಳಿಮನಿ ಖಂಡನೆ

Update: 2019-03-29 17:33 GMT

ಧಾರವಾಡ, ಮಾ.29: ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಬೆಂಬಲಿಗರು ಎಂದು ಹೇಳಿಕೊಂಡು ಕೆಲವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಮನಬಂದಂತೆ ಅವಹೇಳನ ಮಾಡುತ್ತಿರುವುದು ತೀವ್ರ ಖಂಡನೀಯ ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಹಾಗೂ ಕರಾವಳಿ ವಿಭಾಗದ ಉಸ್ತುವಾರಿ ಇಮ್ರಾನ್ ಕಳ್ಳಿಮನಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಎರಡು ಮೂರು ದಿನಗಳಿಂದ ‘ವಿನಯ ಕುಲಕರ್ಣಿ ಸಪೋರ್ಟರ್ಸ್ ಫೇಸಬುಕ್ ಖಾತೆ ಹಾಗೂ ವಾಟ್ಸ್ ಅಪ್’ಗಳಲ್ಲಿ ನಮ್ಮ ಪಕ್ಷದ ಶಿಸ್ತಿನ ಸಿಪಾಯಿಗಳು ಹಾಗೂ ಹಿರಿಯ ನಾಯಕರ ಕುರಿತು ಅವಹೇಳನ ಮಾಡುವುದು ಹಾಗೂ ಮನಬಂದಂತೆ ಹೇಳಿಕೆ ನೀಡಿ ವಿಕೃತಿ ಮೆರೆಯುತ್ತಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆ ನಡೆದರೂ, ಧಾರವಾಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಕೆಪಿಸಿಸಿ ಮುಖಂಡರು, ಪಕ್ಷದ ವಿವಿಧ ಪದಾಧಿಕಾರಿಗಳು, ಮುಖಂಡರು ಪಕ್ಷದ ಪರ ಯಾರೊಬ್ಬರು ಬಹಿರಂಗವಾಗಿ ಧ್ವನಿ ಎತ್ತದಿರುವುದು ನೋವು ತಂದಿದೆ. ನಮಗೆ ಪಕ್ಷ ತಾಯಿ ಇದ್ದಂತೆ. ತಾಯಿಗೆ ದ್ರೋಹ ಬಗೆಯುವುದು ಯಾವ ನ್ಯಾಯ. ಪಕ್ಷದ ಒಳಗಡೆಯಿದ್ದು ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆ ನೀಡುತ್ತಿರುವುದನ್ನು ಕೂಡಲೇ ಕೈಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಹಿಂದೆ ಧಾರವಾಡ ಪಶ್ವಿಮ ವಿಧಾನ ಸಭಾ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದಾಗ ವಿನಯ ಕುಲಕರ್ಣಿ ಅವರು ತಮ್ಮ ಲಿಂಗಾಯತ ಸಮಾಜದ ಮತಗಳನ್ನು ಕೊಡಿಸಿದ್ದರೆ ನಮ್ಮ ಸಮಾಜದವರು ಒಬ್ಬರು ವಿಧಾನಸಭೆ ಪ್ರವೇಶಿಸಿದ್ದರು. ಆದರೆ ಆಗ ಇಲ್ಲದ ಲಿಂಗಾಯತರು ಇವರಿಗೆ ಈಗ ತಮಗೆ ಟಿಕೆಟ್ ನೀಡಿದರೆ ಮಾತ್ರ ಲಿಂಗಾಯತರು ಬೆಂಬಲಕ್ಕೆ ನಿಲ್ಲುತ್ತಾರೆ ಎಂಬುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಇಮ್ರಾನ್ ಕಳ್ಳಿಮನಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News