ನೀತಿ ಸಂಹಿತೆ ಉಲ್ಲಂಘನೆ ಆರೋಪ: ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ದೂರು

Update: 2019-03-29 17:45 GMT

ಮೈಸೂರು,ಮಾ.29: ಚಾಮುಂಡೇಶ್ವರಿ ಕ್ಷೇತ್ರದ ಚುನಾವಣಾ ಪ್ರಚಾರದ ವೇಳ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಪ್ರತಾಪ್ ಸಿಂಹ ಶಿವಲಿಂಗಕ್ಕೆ ಬಿಜೆಪಿ ಪಕ್ಷದ ಶಾಲು ಹಾಕಿ ಪೂಜೆ ಸಲ್ಲಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ವತಿಯಿಂದ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿದೆ.

ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಗೆ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಚುನಾವನಾಧಿಕಾರಿಗಳಿಗೆ ಪ್ರತಾಪ್ ಸಿಂಹ ವಿರುದ್ಧ ದೂರು ನೀಡಿದ್ದಾರೆ.

ಸಂಸದ ಪ್ರತಾಪ್ ಸಿಂಹ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದ ವೇಳೆ ಸಿದ್ದಲಿಂಗಪುರ ಗ್ರಾಮದಲ್ಲಿರುವ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ದೇವರಿಗೆ ಬಿಜೆಪಿ ಶಾಲು ಹಾಕುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ದೇವರಿಗೆ ಬಿಜೆಪಿಯ ಶಾಲು ಹಾಕಿ ಪೂಜೆ ಸಲ್ಲಿಸಿ ಎಲ್ಲರ ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಆ ಮೂಲಕ ಜನರ ಓಲೈಕೆಗೆ ಮುಂದಾಗಿರುವ ಬಿಜೆಪಿ ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳಿಗೆ ಒತ್ತಾಯಿಸಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್‍ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ನಾಯಕ್, ಕೆಪಿಸಿಸಿ ಮಹಿಳಾ ಉಪಾಧ್ಯಕ್ಷೆ ಪುಷ್ಪವಲ್ಲಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಎಲ್.ಭಾಸ್ಕರ್ ಗೌಡ, ಮಾಜಿ ನಗರಪಾಲಿಕೆ ಸದಸ್ಯ ಅಶೋಕ, ಮಾಧ್ಯಮ ವಕ್ತಾರ ಮಹೇಶ್, ಕಾಂಗ್ರೆಸ್ ಮುಖಂಡ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News