ಚುನಾವಣಾ ಕಣದಲ್ಲಿ 15 ಮಂದಿ: ತುಮಕೂರು ಡಿ.ಸಿ ರಾಕೇಶ್ ಕುಮಾರ್

Update: 2019-03-29 18:01 GMT

ತುಮಕೂರು, ಮಾ.29: ಏಪ್ರಿಲ್ 18ರಂದು ನಡೆಯುವ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಅಂತಿಮವಾಗಿ 15 ಮಂದಿ ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ತಿಳಿಸಿದರು. 

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಟ್ಟು 23 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.  ನಾಮಪತ್ರಗಳ ಪರಿಶೀಲನೆ ನಂತರ ನಾಲ್ವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡು 19 ಮಂದಿ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದವು ಎಂದರು. 

ಇಂದು ಪಕ್ಷೇತರ ಅಭ್ಯರ್ಥಿಗಳಾದ ಹೆಚ್.ಎಂ.ಉದಯ ಶಂಕರ್, ಎಸ್.ಪಿ.ಮುದ್ದಹನುಮೇಗೌಡ, ಹೆಚ್.ಎನ್. ನಾಗಾರ್ಜುನ ಹಾಗೂ ಕೆ.ಎನ್. ರಾಜಣ್ಣ ಅವರು ನಾಮಪತ್ರ ಹಿಂಪಡೆದ ಹಿನ್ನಲೆಯಲ್ಲಿ ಅಂತಿಮವಾಗಿ ಚುನಾವಣಾ ಕಣದಲ್ಲಿ 15 ಜನ ಅಭ್ಯರ್ಥಿ ಗಳು ಉಳಿದಿದ್ದಾರೆ.  

ಜನತಾದಳ(ಜಾತ್ಯತೀತ)ದ ಅಭ್ಯರ್ಥಿ ಹೆಚ್.ಡಿ.ದೇವೇಗೌಡ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಜಿ.ಎಸ್.ಬಸವರಾಜ್, ಭಾರತ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಎನ್.ಶಿವಣ್ಣ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕೆ.ಸಿ.ಹನುಮಂತರಾಯ, ಉತ್ತಮ ಪ್ರಜಾಕೀಯ ಪಾರ್ಟಿಯ ಅಭ್ಯರ್ಥಿ ಎಂ.ಆರ್.ಛಾಯಾಮೋಹನ್, ಅಂಬೇಡ್ಕರ್ ಸಮಾಜ್ ಪಾರ್ಟಿ ಅಭ್ಯರ್ಥಿ ಸಿ.ಪಿ.ಮಹಾಲಕ್ಷ್ಮಿ, ಪಕ್ಷೇತರ ಅಭ್ಯರ್ಥಿಗಳಾದ   ಕಪನಿಗೌಡ, ಟಿ.ಎನ್.ಕುಮಾರಸ್ವಾಮಿ, ಜಿ.ನಾಗೇಂದ್ರ, ಪ್ರಕಾಶ್ ಆರ್.ಎ.ಜೈನ್, ಬಿ.ಎಸ್.ಮಲ್ಲಿಕಾರ್ಜುನ್, ಡಿ.ಶರಧಿಶಯನ, ಕೆ.ವಿ.ಶ್ರೀನಿವಾಸ್ ಕಲ್ಕೆರೆ, ಜೆ.ಕೆ.ಸಮಿ ಹಾಗೂ ಸಿದ್ದರಾಮೇಗೌಡ ಟಿ.ಬಿ. ಇವರು ಚುನಾವಣಾ ಕಣದಲ್ಲಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಲಾಗಿದ್ದು, ಇಂದು ಸಂಜೆ ನಮೂನೆ 7(ಎ)ರಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ನಂತರ ಸರ್ಕಾರದ ಹಂತದಲ್ಲಿ ಗೆಜೆಟ್ ನೋಟಿಫಿಕೇಷನ್ ಆಗಲಿದೆ ಎಂದು ಅವರು ತಿಳಿಸಿದರು. 

ಜಿಲ್ಲೆಯಲ್ಲಿ ಪಾರದರ್ಶಕ ಚುನಾವಣೆಯನ್ನು ನಡೆಸುವ ಉದ್ದೇಶದಿಂದ 35 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದ 16,67,760 ರೂ.ಗಳ ನಗದು ವಶಪಡಿಸಿಕೊಂಡಿದ್ದು, 15.20ಲಕ್ಷ ರೂ.ಗಳನ್ನು ಆದಾಯ ತೆರಿಗೆ  ಇಲಾಖೆ ವಶಕ್ಕೆ ನೀಡಲಾಗಿದೆ.  89,84,536 ರೂ. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡು ಇದರೊಂದಿಗೆ 35.80ಲಕ್ಷ ರೂ. ಮೌಲ್ಯದ ವಾಹನಗಳನ್ನು ಜಪ್ತಿ ಮಾಡಲಾಗಿದೆ. 

ಜಿಲ್ಲೆಯಲ್ಲಿ ಮದ್ಯ ಮಾರಾಟದ ಮೇಲೆ ನಿಗಾವಹಿಸಿದ್ದು, ಅಬಕಾರಿ ಇಲಾಖೆಯು 73 ಸೂಕ್ಷ್ಮ ಅಂಗಡಿಗಳನ್ನು ಗುರುತಿಸಿದೆ. ದಾಸ್ತಾನು ಮತ್ತು ಮಾರಾಟದ ವ್ಯತ್ಯಾಸಗಳ ಬಗ್ಗೆ ಅಬಕಾರಿ ಇಲಾಖೆ ಪರಿಶೀಲಿಸುತ್ತಿದ್ದು, ವ್ಯತ್ಯಾಸ ಕಂಡು ಬಂದಿರುವ ಒಂದು ಅಂಗಡಿಗೆ ನೋಟೀಸ್ ಜಾರಿ ಮಾಡಿದ್ದೇವೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಅಂಗಡಿಗಳ ಪರವಾನಗಿಯನ್ನು ರದ್ದು ಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಕೇಂದ್ರ ಚುನಾವಣಾ ಆಯೋಗದಿಂದ ಡಾ.ಬಿಜಯ್ ಕೇತನ್ ಉಪಧ್ಯಾಯ, ಸಾಮಾನ್ಯ ವೀಕ್ಷಕರು, ವಿ.ಎಸ್.ನೇಗಿ ವೆಚ್ಚ ವೀಕ್ಷಕರು ಹಾಗೂ ಮಂಡ್ಯ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಪೋಲಿಸ್ ವೀಕ್ಷಕರಾಗಿ ಜೋಶ್ ಮೋಹನ್ ಆಗಮಿಸಿದ್ದಾರೆ ಎಂದು ಅವರು ತಿಳಿಸಿದರು.   

ಇದೇ ಸಂದರ್ಭದಲ್ಲಿ ಮಾತನಾಡಿದ ಚುನಾವಣಾ ಸಾಮಾನ್ಯ ವೀಕ್ಷಕರಾದ ಡಾ.ಬಿಜಯ್ ಕೇತನ್ ಉಪಧ್ಯಾಯ ಅವರು ಚುನಾವಣೆಯಲ್ಲಿ ನಾನು ಸಾಮಾನ್ಯ ವೀಕ್ಷಕನಾಗಿ ಆಗಮಿಸಿದ್ದು, ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ತಂಗಿದ್ದೇನೆ. ಸಾರ್ವ ಜನಿಕರು ಚುನಾವಣೆಗೆ ಸಂಬಂಧಿಸಿದ ದೂರು ಅಥವಾ ಮಾಹಿತಿಯನ್ನು ನನ್ನ ಮೊಬೈಲ್ ಸಂ.6364248289ಕ್ಕೆ ನೀಡಬಹುದು. ಅಲ್ಲದೆ ಪ್ರತಿದಿನ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೂ ಸಾರ್ವಜನಿಕರಿಗೆ ನನ್ನ ಸಂದರ್ಶನ ಮಾಡಲು ಅವಕಾಶ ಇದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News