ಚಿಕ್ಕಮಗಳೂರು: ಬಿಸಿಲ ಧಗೆಗೆ ತಂಪೆರೆದ ಅಕಾಲಿಕ ಮಳೆ

Update: 2019-03-29 18:18 GMT

ಚಿಕ್ಕಮಗಳೂರು, ಮಾ.29: ಜಿಲ್ಲೆಯ ಮೆಲನಾಡು ತಾಲೂಕುಗಳ ವ್ಯಾಪ್ತಿಯಲ್ಲಿ ಶುಕ್ರವಾರ ಮಳೆಯ ಸಿಂಚನವಾಗಿದ್ದು, ಧಿಡೀರ್ ಸುರಿದ ಅಕಾಳಿಕ ಮಳೆಯು ಜಿಲ್ಲೆಯಾದ್ಯಂತ ಬಿಸಿಲ ಧಗೆಯಿಂದ ಬಸವಳಿದಿದ್ದ ಜನರಿಗೆ ತಂಪೆರೆಯಿತು.

ಶುಕ್ರವಾರ ಚಿಕ್ಕಮಗಳೂರು ಮಧ್ಯಾಹ್ನದ ವೇಳೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಕೆಲವು ಬಾರಿ ಗುಡುಗುಗಳ ಸದ್ದು ಕೇಳಿ ಬಂತು. ಈ ವಾತಾವರಣದಿಂದಾಗಿ ಸಂಜೆ ವೇಳೆಗೆ ಭಾರೀ ಮಳೆಯಾಗಲಿದೆ ಎಂದು ಬಿಸಿಲ ಧಗೆಗೆ ರೋಸಿ ಹೋಗಿದ್ದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಸಂಜೆಯಾದರೂ ವರ್ಷಧಾರೆಯ ಸುಳಿವಿರಲಿಲ್ಲ. ಇದರಿಂದಾಗಿ ಸಾರ್ವಜನರಿಕರು, ರೈತರು ನಿರಾಶರಾಗುವಂತಾಯಿತು.

ಆದರೆ ಜಿಲ್ಲೆಯ ಮಲೆನಾಡು ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಹಾಗೂ ಗುಡುಗು, ಮಿಂಚು ಸದ್ದು ಮಾಡಿ ಮಳೆಯಾಗುವ ಮುನ್ಸೂಚನೆ ನೀಡಿತ್ತು. ನಿರೀಕ್ಷೆಯಂತೆ ಸಂಜೆಯಾಗುತ್ತಿದ್ದಂತೆ ಮೂಡಿಗೆರೆ ತಾಲೂಕಿನ ಗಬ್ಗಲ್, ಕೂವೆ, ಜಾವಳಿ, ಕಳಸ, ಹೊರನಾಡು, ಕೊಟ್ಟಿಗೆಹಾರ, ಬಾಳೆಹೊಳೆ, ಸಂಸೆ ಭಾಗಗಳಲ್ಲಿ ಸಾಧಾರಣ ಮಳೆ ಸುರಿಯಿತ. ಕೊಪ್ಪ ತಾಲೂಕು ವ್ಯಾಪ್ತಿಯ ಜಯಪುರ, ಹೇರೂರು, ಬಸರಿಕಟ್ಟೆ, ಕೊಗ್ರೆ ಮತ್ತಿತರ ಕಡೆಗಳಲಿ ಮಳೆಯಾದ ಬಗ್ಗೆ ವರದಿಯಾಗಿದೆ. 

ಇನ್ನು ಶೃಂಗೇರಿ ತಾಲೂಕು ವ್ಯಾಪ್ತಿಯ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಅಲಿಕಲ್ಲು ಮಳೆಯಾಗಿದೆ. ತಾಲೂಕಿನ ಸಸಿಮನೆ, ಮೆಣಸೆ, ಕಿಗ್ಗಾ, ನೆಮ್ಮಾರು, ಕೆರೆಮನೆ ಮುಂತಾದ ಕಡೆ ಮಳೆ ಧಾರಾಕಾರ ಮಳೆಯಾದರೆ ಶೃಂಗೇರಿ ಪಟ್ಟಣ, ಅಗಳಗಂಡಿ ಮತ್ತಿತರ ಕಡೆಗಳಲ್ಲಿ ಸಾಧಾರಣ ಮಳೆ ಸುರಿದಿದೆ.

ಕಳೆದ ಮೂರು ತಿಂಗಳಿನಿಂದ ಜಿಲ್ಲೆಯಾದ್ಯಂತ ಸೂರ್ಯನ ಬಿಸಿಲಿನ ಝಳಕ್ಕೆ ಸಾರ್ವಜನಿಕರು ರೋಸಿ ಹೋಗಿದ್ದರು. ಅಡಿಕೆ, ಕಾಫಿ ಬೆಳೆಗಾರರು ಅಕಾಲಿಕ ಮಳೆಯ ನಿರೀಕ್ಷೆಯಲ್ಲಿದ್ದರು. ತೋಟಗಳ ರಕ್ಷಣೆಗೆ ಹಳ್ಳಕೊಳ್ಳದ ನೀರನ್ನು ಕದ್ದಮುಚ್ಚಿ ತೋಟಕ್ಕೆ ಹಾಯಿಸಿ ತೋಟಗಳ ರಕ್ಷಣೆಗೆ ಹರಸಾಹಸ ಪಡುತ್ತಿದ್ದರು. ಮಲೆನಾಡಿಲ್ಲಿ ಅಡಿಕೆ ತೋಟಗಳಲ್ಲಿ ಅಡಿಕೆ ಮರದ ಸಿಂಗಾರಗಳು, ಕಾಳುಮೆಣಸಿನ ಬಳ್ಳಿಗಳು ನೀರಿಲ್ಲದೇ ಒಣಗಿದ್ದು, ಗಿಡಗಳ ರಕ್ಷಣೆಗೆ ಹಗಲಿರುಳು ಹರಸಾಹಸ ಪಡುತ್ತಿದ್ದರು. ಶುಕ್ರವಾರ ಮೋಡಕವಿದ ವಾತಾವರಣ ಕಂಡು ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿದ್ದ ರೈತರನ್ನು ವರುಣ ಕೊಂಚ ನಿರಾಶೆ ಮಾಡಿದ್ದರೂ ಸದ್ಯ ಬಿಸಿಲ ಧಗೆಯಾದರೂ ಕಡಿಮೆ ಮಾಡುವಷ್ಟು ಮಳೆ ಬಂತಲ್ಲ ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News