ಶೋಭಾ ಮೋದಿಯ ಮುಖವಾಡ ಧರಿಸಿ ಮತಯಾಚಿಸುತ್ತಿದ್ದಾರೆ: ಪ್ರಮೋದ್ ಮಧ್ವರಾಜ್

Update: 2019-03-30 13:19 GMT

ಚಿಕ್ಕಮಗಳೂರು, ಮಾ.30: ಸಂಸದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರದಲ್ಲಿ ಐದು ವರ್ಷಗಳಿಂದ ಜನಪರ ಯೋಜನೆಗಳ ಜಾರಿ ಸೇರಿದಂತೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಈ ಕಾರಣಕ್ಕೆ ಅವರು ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಸ್ಫರ್ಧಿಸುತ್ತಿದ್ದಾರೆ. ಮೋದಿ ಹೆಸರೇಳಿಕೊಂಡೇ ಮತಯಾಚನೆ ಮಾಡುತ್ತಿದ್ದಾರೆ. ಈ ಬಾರಿ ಮೋದಿ ಹೆಸರಿಗೆ ಮತದಾರರು ಮನ್ನಣೆ ನೀಡುವುದಿಲ್ಲ. ಜನರು ಮೋದಿ ಮುಖವಾಡವನ್ನು ಕಳಚಿಡಲಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಟೀಕಿಸಿದ್ದಾರೆ.

ಶನಿವಾರ ನಗರದಲ್ಲಿ ಮೈತ್ರಿ ಪಕ್ಷಗಳ ಒಕ್ಕೂಟದಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರ ಮತ್ತು ಶಾಸಕರ ಕೆಲಸಕ್ಕೂ ಹಾಗೂ ಪ್ರಧಾನಿ ಮೋದಿ ಅವರ ಕೆಲಸಕ್ಕೂ ಸಂಬಂಧವಿಲ್ಲ, ಆದರೂ ಮೋದಿ ಹೆಸರಿನ ಮುಖವಾಡ ಹಾಕಿಕೊಂಡು ಜನತೆ ಎದುರು ಮತ ಕೇಳುತ್ತಿದ್ದಾರೆ. ಮೋದಿ ಎಂಬ ಮುಖವಾಡ ಕಳಚಿ ಬಿದ್ದರೆ ಅವರ ಸ್ಥಿತಿ ಏನಾಗುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎಂದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ. ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ, ಸಂಸತ್‍ನಲ್ಲಿ ಸಮರ್ಥವಾಗಿ ಚರ್ಚಿಸುವ ಜನಪ್ರತಿನಿಧಿಯ ಆವಶ್ಯಕತೆ ಹಿಂದೆಗಿಂತಲೂ ಪ್ರಸ್ತುತ ಅತ್ಯಂತ ಅವಶ್ಯಕವಾಗಿದೆ ಎಂದ ಅವರು, ಎರಡು ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಈಗಾಗಲೇ ತಿಳಿದುಕೊಂಡಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾಗುವ ಸಂಪೂರ್ಣ ವಿಶ್ವಾಸ ತಮ್ಮಲಿದ್ದು, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್‍ನಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ರಾಷ್ಟ್ರದ ಜನತೆ ನೆಮ್ಮದಿಯಿಂದ ಬದುಕುತ್ತಿದ್ದರು. ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಆಡಳಿತಕ್ಕೆ ಬಂದು ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದ ಜನತೆ ನಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ನೋಟು ಅಪಮೌಲ್ಯೀಕರಣ, ಜಿಎಸ್‍ಟಿ ಜಾರಿ, ನಿರುದ್ಯೋಗದಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು. 

ಪ್ರಧಾನಿ ನರೇಂದ್ರ ಮೋದಿ ಅವರು ಯುಪಿಎ ಸರಕಾರದ ಯೋಜನೆಗಳ ಹೆಸರನ್ನು ಬದಲಿಸಿ ಜಾರಿಗೆ ತಂದರು. ಅವರು ಯಾವುದೇ ಹೊಸ ಯೋಜನೆ ಜಾರಿಗೆ ತಂದಿಲ್ಲ, ಮೋದಿ ಪ್ರಧಾನಿಯಾದ ನಂತರ ಯಾವ ಕೆಲಸ ಮಾಡಿದ್ದಾರೆ ಎಂದು ಕೇಳಿದರೆ ಜಿಜೆಪಿ ಅವರ ಬಳಿ ಉತ್ತರವೇ ಇಲ್ಲ ಎಂದು ಟೀಕಿಸಿದರು.

ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ. ಎರಡು ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ತಮ್ಮ ವಿರುದ್ಧ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಅಪಸ್ವರ ಕೇಳಿ ಬಂದಿಲ್ಲ. ಎರಡು ಪಕ್ಷದ ಕಾರ್ಯಕರ್ತರು ತನ್ನನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದಾರೆ. ತಾಲೂಕು ಮಟ್ಟದಲ್ಲಿ ಸಮಾವೇಶ ಮಾಡಲಾಗಿದೆ. ನಂತರ ಹೋಬಳಿ ಮಟ್ಟದಲ್ಲಿ ಸಮಾವೇಶ ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಕುಮಾರ್, ಜಿಲ್ಲಾ ವಕ್ತಾರ ಶಿವಾನಂದಸ್ವಾಮಿ, ಸಿಪಿಐ ನಾಯಕಿ ರಾಧಾಸುಂದರೇಶ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ತೆರವು ಬಡಜನತೆಯನ್ನು ಕಂಗಾಲು ಮಾಡಿದೆ. ಸರ್ವೋಚ್ಚ ನ್ಯಾಯಾಲಯ ಒತ್ತುವರಿ ತೆರವುಗೊಳಿಸುವಂತೆ ಆದೇಶ ನೀಡಿದೆ. ಅರಣ್ಯವಾಸಿಗಳ ಅನುಕೂಲಕ್ಕಾಗಿ ಹಿಂದಿನ ಪ್ರಧಾನಿ ಡಾ.ಮನಮೋಹನ್‍ಸಿಂಗ್ ಅವರು ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದರು. ಈ ಕಾಯ್ದೆಯಡಿ ಸಾವಿರಾರು ಅರಣ್ಯವಾಸಿಗಳು ಒತ್ತುವರಿ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ತಾಂತ್ರಿಕ ಕಾರಣದಿಂದ ಕೆಲ ಅರ್ಜಿಗಳು ವಜಾ ಆಗಿದ್ದವು. ಕೇಂದ್ರ ಸರಕಾರದ ಪರ ವಕೀಲರು ಸರ್ವೋಚ್ಚ ನ್ಯಾಯಾಲಯದಲ್ಲಿ ಸರಿಯಾದ ರೀತಿಯಲ್ಲಿ ವಾದ ಮಂಡಿಸದೇ ಇದ್ದ ಪರಿಣಾಮ ತೀರ್ಪು ಅರಣ್ಯವಾಸಿಗಳ ವಿರುದ್ಧವಾಗಿ ಬಂತು. ಅರಣ್ಯವಾಸಿಗಳಿಗೆ ಆದ ಅನ್ಯಾಯದ ವಿರುದ್ಧ ಮೊದಲು ಧ್ವನಿ ಎತ್ತಿದವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ. ಕ್ಷೇತ್ರದಲ್ಲಿನ ಅರಣ್ಯವಾಸಿಗಳ ಪರ ಶೋಭಾ ಒಮ್ಮೆಯೂ ಸಂಸತ್‍ನಲ್ಲಿ ಧ್ವನಿ ಎತ್ತಿಲ್ಲ.

- ಪ್ರಮೋದ್ ಮಧ್ವರಾಜ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News