ಕರಡಿ ದಾಳಿ: ರೈತನ ಸ್ಥಿತಿ ಗಂಭೀರ
Update: 2019-03-30 19:56 IST
ದಾವಣಗೆರೆ,ಮಾ.30: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿಯೊಂದು ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ರೈತ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ಜಗಳೂರು ತಾಲೂಕಿನಲ್ಲಿ ವರದಿಯಾಗಿದೆ.
ಜಗಳೂರು ತಾ. ಬಸಾಪುರ ಗ್ರಾಮದ ಚಂದ್ರನಾಯ್ಕ(50) ಕರಡಿ ದಾಳಿಗೆ ಒಳಗಾದ ವ್ಯಕ್ತಿ. ಎಂದಿನಂತೆ ಬೆಳಗ್ಗೆ ಹೊಲಕ್ಕೆ ಕೆಲಸ ಮಾಡಲೆಂದು ಹೋಗಿದ್ದ ಚಂದ್ರನಾಯ್ಕ ಮೇಲೆ ಕರಡಿ ದಾಳಿ ಮಾಡಿ, ಮುಖ ದೇಹದ ಬಹುತೇಕ ಭಾಗಗಳು ಕಿತ್ತು ಬರುವಂತೆ ಗಾಯಗೊಳಿಸಿದೆ.
ಕರಡಿ ದಾಳಿ ವೇಳೆ ರೈತ ಚಂದ್ರನಾಯ್ಕ ಪ್ರತಿರೋಧವನ್ನೊಡ್ಡಿದ್ದು, ನೆರೆ ಹೊರೆಯ ರೈತರು ಚಂದ್ರನಾಯ್ಕ ಕೂಗಾಟ ಕೇಳಿಸಿಕೊಂಡು ಕೋಲು, ಕಲ್ಲುಗಳನ್ನು ಹಿಡಿದು, ಕೂಗುತ್ತಾ ಕರಡಿಯನ್ನು ಅಲ್ಲಿಂದ ಓಡಿಸಿದ್ದಾರೆ. ತೀವ್ರ ಗಾಯಗೊಂಡ ಚಂದ್ರನಾಯ್ಕ ಸ್ಥಿತಿ ಗಂಭೀರವಾಗಿದ್ದು, ಜಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.