×
Ad

ಕ್ಷಮೆ ಕೇಳಿದ್ದಕ್ಕೆ ಟಿಕೆಟ್ ಪಡೆದೆ ಎಂಬುದು ಸಲ್ಲ: ಕೊಪ್ಪಳ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ

Update: 2019-03-30 21:07 IST

ಕೊಪ್ಪಳ, ಮಾ.30: ಕ್ಷಮೆ ಕೇಳಿದ ಮಾತ್ರಕ್ಕೆ ಟಿಕೆಟ್ ಕೊಟ್ಟರು ಎಂಬುದು ಸರಿಯಲ್ಲ. ಪಕ್ಷ ಎಂಬುದು ಕುಟುಂಬವಿದ್ದಂತೆ. ಇಲ್ಲಿ ಒಂದು ಮಾತು ಬರುತ್ತದೆ, ಹೋಗುತ್ತದೆ. ಇದೇ ಮಾತನ್ನು ನಮ್ಮ ನಾಯಕರು ತಿಳಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಹೇಳಿದ್ದಾರೆ.

ಕಡೆಯ ಕ್ಷಣದಲ್ಲಿ ಪಕ್ಷದಿಂದ ಟಿಕೆಟ್ ಪಡೆದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಇತ್ತು. ಈ ಹಿನ್ನೆಲೆಯಲ್ಲಿ ಪಕ್ಷ ಮೊದಲ ಪಟ್ಟಿಯಲ್ಲಿ ನನ್ನ ಹೆಸರನ್ನು ಪ್ರಕಟಿಸಿರಲಿಲ್ಲ. ಕ್ಷಮೆ ಕೇಳಿದ ಮಾತ್ರಕ್ಕೆ ಟಿಕೆಟ್ ಪಡೆದ ಎಂಬ ಮಾತು ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ನಿಂದ ರಾಜಶೇಖರ್ ಹಿಟ್ನಾಳ್ ಕಣದಲ್ಲಿದ್ದಾರೆ. ಹೀಗಾಗಿ, ಅದರ ಲೆಕ್ಕಾಚಾರ ಮಾಡಿ ಪಕ್ಷ ನನಗೆ ಟಿಕೆಟ್ ನೀಡಿದ್ದು, ಕಳೆದ ವಿಧಾನಸಭಾ ಚುನಾವಣೆ ವೇಳೆ ನಡೆದ ಕಹಿಘಟನೆ ಮರೆತು ಪಕ್ಷದ ನಾಯಕರೆಲ್ಲ ಒಂದಾಗಿದ್ದೇವೆ. ಜನರ ಮನಸ್ಸಿನಲ್ಲಿ ಮೋದಿ ಇದ್ದಾರೆ. ಅದೇ ನಮಗೆ ರಕ್ಷೆಯಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಪ್ರಿಲ್ 1, 3 ಅಥವಾ 4 ರಂದು ನಾಮಪತ್ರ ಸಲ್ಲಿಸುತ್ತೇವೆ. 4 ರಂದು ಸಾರ್ವಜನಿಕವಾಗಿ ನಾಮಪತ್ರ ಸಲ್ಲಿಸಲು ನಿರ್ಧಾರ ಮಾಡಿದ್ದೇವೆ. ಪಕ್ಷದ ರಾಜ್ಯ ಮುಖಂಡರಾದ ಜಗದೀಶ ಶೆಟ್ಟರ್, ಶ್ರೀರಾಮುಲು, ಲಕ್ಷ್ಮಣ ಸವದಿ ಸೇರಿದಂತೆ ಇತರರು ಬರುವ ನಿರೀಕ್ಷೆ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News