ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ: ಬಿಸಿಲ ಝಳಕ್ಕೆ ತತ್ತರಿಸುತ್ತಿರುವ ಜನರು
ಬೆಂಗಳೂರು, ಮಾ.30: ಬೆಂಗಳೂರಿನಲ್ಲಿ ಸುಡುವ ಬಿಸಿಲ ಝುಳ ಅಧಿಕವಾಗಿದ್ದು, ಮಾ.30 ರಂದು ನಗರದಲ್ಲಿ 36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಕಳೆದ ವರ್ಷದ ಮಾರ್ಚ್ ಅಂತ್ಯಕ್ಕೆ ಹೋಲಿಸಿಕೊಂಡರೆ ಅಂದಾಜು 2.ಡಿ.ಸೆ ತಾಪಮಾನ ಅಧಿಕವಾಗಿದೆ.
2018ರ ಮಾ.24 ರಂದು 34.1, 2017ರ ಮಾ.26ರಂದು 37.2, 2016 ಮಾ.23ರಂದು 36.3 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿತ್ತು. 1996ರ ಮಾ.29ರಂದು 37.3 ಡಿ.ಸೆ. ದಾಖಲಾಗಿರುವುದು ಮಾರ್ಚ್‌ನಲ್ಲಿ ದಾಖಲಾದ ಅತ್ಯಧಿಕ ಗರಿಷ್ಠ ತಾಪಮಾನವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿ.ಸೆ. ದಾಟಿದ್ದು, ವಾಡಿಕೆಗಿಂತ 2.3 ಡಿ.ಸೆ. ಅಧಿಕವಾಗಿದೆ. ಇನ್ನೂ ಒಂದೆರಡು ದಿನಗಳ ಕಾಲ ಗರಿಷ್ಠ 35-36 ಡಿ.ಸೆ.ನಲ್ಲಿಯೇ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ತಾಪ ಏರಿಕೆ: ಬೇಸಿಗೆ ಆರಂಭದಲ್ಲಿ ನಗರದಲ್ಲಿ 33.8 ಡಿ.ಸೆ. ಗರಿಷ್ಠ ತಾಪಮಾನವಿತ್ತು. ದಿನ ಕಳೆದಂತೆ ಬಿಸಿಲ ಬೇಗೆಯೂ ಏರಿದೆ. ತಮಿಳುನಾಡು, ಆಂಧ್ರ ಪ್ರದೇಶದಲ್ಲಿನ ಬಿಸಿಗಾಳಿ ಪ್ರಭಾವದಿಂದಾಗಿ ಮಾ.7ರಂದು ಏಕಾಏಕಿ ಗರಿಷ್ಠ ತಾಪಮಾನ 37 ಡಿ.ಸೆ. ದಾಖಲಾಗಿತ್ತು. ನಂತರದಲ್ಲಿ ಮಾ.10ಕ್ಕೆ 34, ಮಾ.20ಕ್ಕೆ 35, ಮಾ.25ಕ್ಕೆ 35.5 ಡಿ.ಸೆ. ದಾಖಲಾಗಿತ್ತು. ಇದೀಗ 36.2 ಡಿ.ಸೆ.ಗೆ ಗರಿಷ್ಠ ತಾಪಮಾನ ಏರಿದೆ.
ನಗರದಲ್ಲಿ ಒಣಹವೆ ಮುಂದುವರಿಯಲಿದ್ದು, ಭಾಗಶಃ ಮೊಡ ಕವಿದ ವಾತಾವರಣ ಇರಲಿದೆ. ಬೆಳಗಾವಿ, ಧಾರವಾಡ, ಗದಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೆಸೂರು ಹಾಗೂ ಶಿವಮೊಗ್ಗದ ಕೆಲವೆಡೆ ಮುಂದಿನ ಒಂದು ವಾರ ತುಂತುರು ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬಳ್ಳಾರಿಯಲ್ಲಿ ಅತ್ಯಧಿಕ ಬಿಸಿಲು: ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕನಿಷ್ಠ ಪ್ರಮಾಣದಲ್ಲಿ ಬಿಸಿಲಿದೆ. ಆದರೆ, ಬಳ್ಳಾರಿಯಲ್ಲಿ 42, ಕಲಬುರಗಿಯಲ್ಲಿ 41.5, ರಾಯಚೂರಿನಲ್ಲಿ 40 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದ್ದು, ಅಚ್ಚರಿಯನ್ನುಂಟು ಮಾಡಿದೆ. 1996ರ ಮಾರ್ಚ್‌ನಲ್ಲಿ ಬಳ್ಳಾರಿಯಲ್ಲಿ 43 ಡಿ.ಸೆ. ದಾಖಲಾಗಿರುವುದು ಇಲ್ಲಿಯವರೆಗಿನ ಗರಿಷ್ಠ ತಾಪಮಾನ. ಉಳಿದ ಪ್ರತಿ ಮಾರ್ಚ್‌ನಲ್ಲಿ ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 40-42 ಡಿ.ಸೆ. ನಡುವೆಯೆ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.