ನಿಖಿಲ್ ನಾಮಪತ್ರ ಗೊಂದಲ ಮುಗಿದಿದೆ: ಸಂಜೀವ್ ಕುಮಾರ್
ಮಂಡ್ಯ, ಮಾ.30: ಮಂಡ್ಯ ಲೋಕಸಭಾ ಕ್ಷೇತ್ರ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಿಂಧುಗೊಳಿಸಿರುವ ಪ್ರಕರಣ ಸಂಬಂಧ ಶನಿವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ನಗರದ ಡಿಸಿ ಕಚೇರಿಗೆ ಭೇಟಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜೀವ್ ಕುಮಾರ್, ನಿಖಿಲ್ ನಾಮಪತ್ರ ಗೊಂದಲ ಹಾಗೂ ಅಂಗೀಕಾರ ಮುಗಿದು ಹೋದ ಅಧ್ಯಾಯ. ಈಗ ಏನಿದ್ದರೂ ಕೋರ್ಟ್‍ಗೆ ಹೋಗಬಹುದು. ಆಡಳಿತಾತ್ಮಕ ಲೋಪದ ಬಗ್ಗೆ ನೋಟ್ ಮಾಡಿಕೊಂಡಿದ್ದೇವೆ. ಪ್ರಕರಣದ ಬಗ್ಗೆ ತನಿಖೆ ಮಾಡಲಾಗುವುದು ಎಂದರು.
ಸುಮಾರು ಎರಡು ಗಂಟೆಗಳ ಕಾಲ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲೇ ಇದ್ದ ಸಂಜೀವ್‍ನಕುಮಾರ್, ಕೆಲವೊಂದು ಮಾಹಿತಿಗಳನ್ನು ಅಧಿಕಾರಿಗಳಿಂದ ಪಡೆದರು ಎಂದು ಹೇಳಲಾಗಿದೆ. ಸಂಜೀವ್ ಕುಮಾರ್ ಜೊತೆ ಪೊಲೀಸ್ ವೀಕ್ಷಕರು, ಚುನಾವಣಾ ವೆಚ್ಚದ ವೀಕ್ಷಕರು ಉಪಸ್ಥಿತರಿದ್ದರು.
ನಿಖಿಲ್ ಸಲ್ಲಿಸಿರುವ ನಾಮಪತ್ರ ಕ್ರಮಬದ್ಧವಾಗಿಲ್ಲ. ಕೆಲವು ಕಾಲಂಗಳನ್ನು ಭರ್ತಿ ಮಾಡಿರಲಿಲ್ಲ. ಈ ಸಂಬಂಧ ನಾಮಪತ್ರ ಪರಿಶೀಲನೆ ವೇಳೆ ನನ್ನ ಆಕ್ಷೇಪಣೆಯನ್ನು ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ಪರಿಗಣಿಸಲಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಚುನಾವಣಾ ಪ್ರತಿನಿಧಿ ಮದನ್ ಕುಮಾರ್ ಆರೋಪಿಸಿದ್ದರು. ಇದಲ್ಲದೆ, ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿ ಅವರಿಗೆ ದೂರು ನೀಡಿದ್ದ ಮದನ್, ನಾಮಪತ್ರ ಪರಿಶೀಲನೆ ವೇಳೆಯಲ್ಲಿನ ವೀಡಿಯೋವನ್ನು ನೀಡಲು ಕೋರಿ ದೂರು ಸಲ್ಲಿಸಿದ್ದರು. ಆದರೆ, ಅಪೂರ್ಣ ವೀಡಿಯೋ ನಕಲನ್ನು ನೀಡಿದ್ದಾರೆ. ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಮದನ್ ಹೇಳಿದ್ದರು.
ಶುಕ್ರವಾರ ಚುನಾವಣಾ ಪ್ರಚಾರ ವೇಳೆ ಈ ವಿಚಾರವಾಗಿ ಸುಮಲತಾ ಅಂಬರೀಷ್ ಅವರೂ ಜಿಲ್ಲಾ ಚುನಾವಣಾಧಿಕಾರಿ ಅವರ ಕಾರ್ಯವೈಖರಿಯನ್ನು ಟೀಕಿಸಿದ್ದಲ್ಲದೆ, ಸಿಎಂ ಹೇಳಿದಂತೆ ಕೇಳುತ್ತಿದ್ದಾರೆಂದು ಆರೋಪಿಸಿದ್ದರು.