ನೋವು ಮರೆಯಲು ಜನರ ಮುಂದೆ ಬಂದಿದ್ದೇನೆ: ಸುಮಲತಾ ಅಂಬರೀಶ್

Update: 2019-03-30 16:15 GMT

ಮಂಡ್ಯ, ಮಾ.30: ತಮ್ಮ ಕುರ್ಚಿಗೆ ಗೌರವ ಕೊಡದೇ, ಮಹಿಳೆ ಎನ್ನುವುದನ್ನೂ ನೋಡದೇ ಸಿಎಂ ಕುಮಾರಸ್ವಾಮಿ ಹಾಗೂ ಸಚಿವರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ನನ್ನ ಮುಖದಲ್ಲಿ ನೋವಿಲ್ಲ ಎಂದೆಲ್ಲಾ ಹೇಳುತ್ತಾರೆ. ನೋವು ಮರೆಯಲು ನಾನು ಜನರ ಮುಂದೆ ಬಂದಿದ್ದೇನೆ ಎಂದು ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಜೆಡಿಎಸ್ ನಾಯಕರ ವಿರುದ್ಧ ತನ್ನ ವಾಗ್ದಾಳಿ ಮುಂದುವರಿಸಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದ ಕೀಲಾರ ಗ್ರಾಮದಲ್ಲಿ ಶನಿವಾರ ಅಬ್ಬರ ಪ್ರಚಾರದ ನಡುವೆ ಅಭೂತಪೂರ್ವ ಬೆಂಬಲ ನೀಡಿದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ನನಗೆ ಅನುಕಂಪ ಬೇಡ, ಜನರ ಪ್ರೀತಿ ಬೇಕು. ಆ ನೋವನ್ನು ಕಳೆದುಕೊಳ್ಳಲು ನಿಮ್ಮ ಮುಂದೆ ನಿಂತಿದ್ದೇನೆ ಎಂದು ವಿನಂತಿಸಿದರು.

ನಾನು ಯಾರ ಮುಂದೇಯೂ ಕಣ್ಣೀರು ಹಾಕಲ್ಲ. ನನಗೆ ನೋವಾದಾಗ ನನ್ನ ಜೊತೆಗಿದ್ದವರು ಮಂಡ್ಯ ಜನ. ಆ ಮಂಡ್ಯ ಜನರ ಜೊತೆ ನಾನು ಇರುತ್ತೇನೆ. ಕಾಂಗ್ರೆಸ್ ಕಾರ್ಯಕರ್ತರು ಬಾವುಟ ಹಿಡಿದು ನನ್ನ ಮುಂದೆ ಬಂದಿದ್ದಾರೆ. ರೈತ ಸಂಘ, ಕಾಂಗ್ರೆಸ್, ಬಿಜೆಪಿ ಮೂರು ಶಕ್ತಿ ನನ್ನ ಜೊತೆ ಇದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಇಂತಹ ಬೆಂಬಲ ದೇಶದಲ್ಲಿ ಯಾರಿಗೆ ಸಿಕ್ಕಿದೆ ಹೇಳಿ. ಅಂಬರೀಷ್ ಇಲ್ಲ, ನಾನು ಸ್ಪರ್ಧೆ ಮಾಡಿದ್ದೀನಿ ಅನ್ನೋ ಕಾರಣಕ್ಕೆ ನನ್ನ ಬಗ್ಗೆ ಮಾತನಾಡ್ತಾರೆ. ನನ್ನ ಹೆಸರಲ್ಲಿ ಮೂರು ಜನ ಅಭ್ಯರ್ಥಿ ಹಾಕಿದ್ದಾರೆ. ಇನ್ನು ಏನು ಕುತಂತ್ರ ಮಾಡುತ್ತಾರೆ ಮಾಡಲಿ. ಮಹಿಳೆಯ ಬಗ್ಗೆ ಕೇವಲವಾಗಿ ಮಾತನಾಡುವವರಿಗೆ ಮಹಿಳೆಯರೇ ಉತ್ತರ ಕೊಡಬೇಕು ಎಂದು ಅವರು ಮನವಿ ಮಾಡಿದರು.

ಸುಮಲತಾ ರೋಡ್ ಶೋನಲ್ಲಿ ಬಿಜೆಪಿ, ಕಾಂಗ್ರೆಸ್ ಬಾವುಟ, ರೈತಸಂಘದ ಹಸಿರು ಟವಲ್‍ಗಳು ರಾರಾಜಿಸಿದವು. ಸುಮಲತಾಗೆ ಕಹಳೆ ಚಿಹ್ನೆ ಸಿಕ್ಕ ಹಿನ್ನೆಲೆಯಲ್ಲಿ ಪ್ರಚಾರದ ವೇಳೆ ಕಾರ್ಯಕರ್ತರು ಕಹಳೆ ಊದಿ ಮತಯಾಚಿಸಿದರು.

ಮಾಜಿ ಶಾಸಕ ಎಚ್.ಬಿ.ರಾಮು, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಹುಲಿವಾನ ವಿಜಯಕುಮಾರ್, ರಮೇಶ್, ಜಿ.ಸಿ.ಆನಂದ್, ಬಿ.ಚಂದ್ರ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News