ಮಣ್ಣಿನ ಮಕ್ಕಳು ಯಾಕೆ ಭಯಪಡಬೇಕು: ಸಿ.ಟಿ ರವಿ ಪ್ರಶ್ನೆ

Update: 2019-03-30 16:17 GMT

ಮಂಡ್ಯ, ಮಾ.30: ಐಟಿ ದಾಳಿಗೆ ಯಾರು ಅಕ್ರಮ ಹಣ ಇಟ್ಟಿರುತ್ತಾರೋ ಅವರು ಭಯ ಪಡಬೇಕು. ಮಣ್ಣಿನ ಮಕ್ಕಳು ಯಾಕೆ ಭಯಪಡಬೇಕು ಎಂದು ಶಾಸಕ, ಬಿಜೆಪಿ ಮುಖಂಡ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಾಬ್ಧಾರಿಯುತ ಸ್ಥಾನದಲ್ಲಿರುವ ಸಿಎಂ ಕುಮಾರಸ್ವಾಮಿ ವಾಟಾಳ್ ನಾಗರಾಜು ರೀತಿ ಹತಾಶೆ ಹೇಳಿಕೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಐಟಿ ದಾಳಿ ಭಯೋತ್ಪಾದಕರ ದಾಳಿ ಅಲ್ಲ. ಆದರೆ, ಭಯೋತ್ಪಾದಕರ ದಾಳಿ ಆದಾಗ ದಳದ ನಾಯಕರು, ಕೈ ನಾಯಕರು ಬೀದಿಗೆ ಇಳಿದು ಹೋರಾಟ ಮಾಡಿಲ್ಲ ಎಂದು ಅವರು ಟೀಕಿಸಿದರು.

ಕುಮಾರಸ್ವಾಮಿ ಅವರು ಗೌಪ್ಯತೆ ಕಾಪಾಡುತ್ತೇನೆ ಎಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ, ಐಟಿ ದಾಳಿ ಆಗುವ ಹಿಂದಿನ ದಿನ ಈ ಮಾಹಿತಿ ಲೀಕ್ ಮಾಡಿದ್ದಾರೆ. ಇದು ಕಳ್ಳರನ್ನು ಕಾಪಾಡುವ ತಂತ್ರವಾಗಿದೆ. ಹಾಗಾಗಿ ಸಿಎಂ ಆಗಿ ಮುಂದುವರಿಯಲು ನೈತಿಕತೆ ಇಲ್ಲ ಎಂದು ಅವರು ಆರೋಪಿಸಿದರು.

ಸಿಎಂ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಮುಂದಾಗಿದ್ದಾರೆ. ಬಾಯಿ ಬಡಿದುಕೊಳ್ಳುತ್ತಿರುವುದು ನೋಡಿದರೆ ಚುನಾವಣೆಗೆ ಬಳಸಲು ಸಾಕಷ್ಟು ಸಂಗ್ರಹಣೆ ಮಾಡಿರಬಹುದು. ತನಿಖೆ ಮಾಡಿದರೆ ದೊಡ್ಡವರ ಬುಡಕ್ಕೆ ಬರುತ್ತೆ ಎಂದು ಅವರು ಆಪಾದಿಸಿದರು.

ಸಚಿವ ಸಿ.ಎಸ್.ಪುಟ್ಟರಾಜು ಈ ವಿಚಾರದಲ್ಲಿ ಕೇಂದ್ರ ಸರಕಾರ, ನಮ್ಮ ಪಕ್ಷದ ಅಧ್ಯಕ್ಷರು, ತಮಿಳು ನಟ, ಸುಮಲತಾ ಅಂಬರೀಷ್ ಅವರ ಹೆಸರನ್ನು ಎಳೆದು ತಂದು ದಾಳಿಯನ್ನು ರಾಜಕೀಕರಣಗೊಳಿಸಲು ಯತ್ನಿಸಿದ್ದಾರೆ ಎಂದೂ ದೂರಿದರು.

ರವಿವಾರ ಸಂಜೆ ಐದು ಗಂಟೆಗೆ ಪ್ರಧಾನಿ ಮೋದಿ ಅವರ ಜತೆ ವಿಡಿಯೋ ಸಂವಾದವಿದೆ. ದೇಶದ 500ಕ್ಕೂ ಹೆಚ್ಚು ಕಡೆ ಸಂವಾದ ನಡೆಯಲಿದೆ. ಮೊದಲ ಬಾರಿ ವೋಟ್ ಮಾಡುವವರು, ವ್ಯಾಪಾರಿಗಳು ಈ ಸಂವಾದದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಇದೇ ವೇಳೆ ಸಿ.ಟಿ.ರವಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News