'ಸಂವಿಧಾನ ಉಳಿವಿಗಾಗಿ ನಾವು' ಅಭಿಯಾನಕ್ಕೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಚಾಲನೆ

Update: 2019-03-30 16:36 GMT

ಮೈಸೂರು,ಮಾ.30: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾದ “ಸಂವಿಧಾನ ಉಳಿವಿಗಾಗಿ ನಾವು” ಅಭಿಯಾನಕ್ಕೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು.

ನಗರದ ಟಿ.ಕೆ.ಲೇಔಟ್‍ನಲ್ಲಿರುವ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಂವಿಧಾನ ಉಳಿವಿಗಾಗಿ ನಾವು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಸಂವಿಧಾನ ವಿರೋಧಿ ಪಕ್ಷವಾಗಿದೆ. ಕೋಮುವಾದಿ ಪಕ್ಷ ಕೂಡ ಆಗಿದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂದು ಜನರಲ್ಲಿ ಜಾಗೃತಿ ಮೂಡಿಸಲು ಈ ಅಭಿಯಾನ ಶುರುಮಾಡಿದ್ದೇವೆ ಎಂದು ಹೇಳಿದರು.

ನಾವು ಯಾರನ್ನೂ ಹೆದರಿಸುತ್ತಿಲ್ಲ, ನಮ್ಮ ದೇಶದಲ್ಲಿ ಇಂದು ಸಂವಿಧಾನಕ್ಕೆ ಅಪಾಯ ಕಾದಿದೆ. ಇದನ್ನು ನಾವು ಹೇಳುತ್ತಿಲ್ಲ, ಬಿಜೆಪಿಯವರೆ ಕೆಲವರು ಹೇಳುತ್ತಿದ್ದಾರೆ ಎಂದರು.

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ಕುರಿತು ಮಾತನಾಡಿದ ಯತೀಂದ್ರ, ಸಂವಿಧಾನದ ಪರಿಕಲ್ಪನೆಯನ್ನು ಸುಡುವಂತೆ ಅವರ ಬಿಜೆಪಿ ಎಂಪಿ ಸಾಕ್ಷಿ ಮಹಾರಾಜ್ ಹೇಳುತ್ತಾರೆ. 2028 ಕ್ಕೆ ಭಾರತದಲ್ಲಿ ಚುನಾವಣೆ ನಡೆಸುವುದಿಲ್ಲ ಅಂತ ಹೇಳುತ್ತಾರೆ. ಹಾಗಾದರೆ ಇದರ ಅರ್ಥ ಏನು? ಒಟ್ಟಾರೆ ಅವರ ಅಜೆಂಡಾ ಭಾರತದಲ್ಲಿ ಸಂವಿಧಾನ ವನ್ನು ಬುಡಮೇಲು ಮಾಡಬೇಕು ಎಂಬುದಾಗಿದೆ. ಸಂವಿಧಾನದಿಂದ ಬಡವರು, ದಲಿತರು, ಹಿಂದುಳಿದ ವರ್ಗಗಳ ಹಕ್ಕನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಸ್ವಾತಂತ್ರ್ಯವನ್ನು ಪಡೆದುಕೊಂಡ ನಾವು ಸಂವಿಧಾನದ ರಕ್ಷಣೆ ಮಾಡಲು ಈ ಹೋರಾಟಕ್ಕೆ ಇಳಿದಿದ್ದೇವೆ ಎಂದರು. ದೇಶದಲ್ಲಿ ನಾವು ಸಂವಿಧಾನ ರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್, ದ್ಯಾವಪ್ಪ ನಾಯಕ, ಗ್ರಾಮಾಂತರ ಅದ್ಯಕ್ಷ ಜಾಕೀರ ಹುಸೇನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News