ಕಡ್ಡಾಯ ಮತದಾನ ಪ್ರಜಾಪ್ರಭುತ್ವದ ವರದಾನ: ಡಾ.ಕೆ.ವಿ.ರಾಜೇಂದ್ರ

Update: 2019-03-30 17:05 GMT

ಬೆಳಗಾವಿ, ಮಾ.30: ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ, ಹಾಗಾಗಿ ದುಡ್ಡು, ಸಾರಾಯಿ, ಸಾಮಗ್ರಿಗಳಿಗೆ ತಮ್ಮ ಮತ ಮಾರಿಕೊಳ್ಳದೆ ದೇಶದ ಭವಿಷ್ಯಕ್ಕಾಗಿ ನೈತಿಕ ಮತದಾನ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ.

ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹೆಚ್ಚಿನ ಮತದಾನವನ್ನು ಕೈಗೊಳ್ಳುವ ಉದ್ದೇಶದಿಂದ ಮತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಗರದ ಕೇಂದ್ರ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಶನಿವಾರ ಸ್ಥಾಪಿಸಲಾದ ಮತದಾನ ಪ್ರಾತ್ಯಕ್ಷಿಕ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಯುವ ಸಮುದಾಯವೇ ನವಭಾರತದ ಶಿಲ್ಪಿಗಳು. ಆದುದರಿಂದ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಶ್ರೀಮಂತರು, ಬಡವರು, ಅಧಿಕಾರಿಗಳೆಲ್ಲರಿಗೂ ಸಮಾನವಾದ ಮತದಾನದ ಹಕ್ಕು ಇರುವುದರಿಂದ ಎಲ್ಲರೂ ಜೊತೆಗೂಡಿ ನಿರ್ಲಕ್ಷ ತೋರಿಸದೇ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಅವರು ಕರೆ ನೀಡಿದರು.

ವಿವಿ ಪ್ಯಾಟ್ ಮೂಲಕ ತಮ್ಮ ಮತವನ್ನು ಯಾವ ವ್ಯಕ್ತಿಗೆ ನೀಡಿದ್ದೇವೆ ಎಂಬುದನ್ನು ಮತ ನೀಡಿದ 7 ಸೆಕೆಂಡ್‌ಗಳಲ್ಲಿ ಬಾಕ್ಸ್‌ನಲ್ಲಿರುವ ಸ್ಲಿಪ್‌ನ್ನು ನೋಡಿ ತಿಳಿದುಕೊಳ್ಳಬಹುದು ಎನ್ನುವುದನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟ ಅವರು, ದೇಶದ ಸಮಗ್ರ ಅಭಿವೃದ್ಧಿಜಗೆ ಪ್ರಜಾಪ್ರಭುತ್ವದ ಬೆಳವಣಿಗೆ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಮತದಾನ ಎಂಬ ಹಕ್ಕನ್ನು ಚಲಾಯಿಸಿ ಎಂದರು.

ವಿಕಲಚೇತನ ಅಂತರ್ ರಾಷ್ಟ್ರೀಯ ಈಜು ಪಟು ರಾಘವೇಂದ್ರ ಅಣ್ವೇಕರ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಎಷ್ಟು ಮುಖ್ಯವೊ ಅದೇ ರೀತಿ ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಅಷ್ಟೇ ಮುಖ್ಯ. ಯೋಗ್ಯರಲ್ಲದವರಿಗೆ ನಿಮ್ಮ ಮತ ಚಲಾಯಿಸಿ ವ್ಯರ್ಥ ಮಾಡದೆ ಯೋಚಿಸಿ, ನಿರ್ಧರಿಸಿ ಮತದಾನ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಇಬ್ರಾಹಿಮ್ ಮೈಗೂರ, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಪದ್ಮಜಾ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News