ಜಿಲ್ಲೆಯ ಅಭಿವೃದ್ಧಿಗೆ ನನ್ನನ್ನು ಗೆಲ್ಲಿಸಿ: ನಿಖಿಲ್ ಕುಮಾರಸ್ವಾಮಿ ಮನವಿ

Update: 2019-03-30 17:15 GMT

ಮಂಡ್ಯ, ಮಾ.30: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ದೃಷ್ಠಿಯಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಮದ್ದೂರು ತಾಲೂಕಿನ ಕೆಸ್ತೂರು ಜಿಪಂ ವ್ಯಾಪ್ತಿಯ ಹೆಮ್ಮನಹಳ್ಳಿ, ತೊರೆಶಟ್ಟಿಹಳ್ಳಿ, ಮಾಚಹಳ್ಳಿ, ಕೆಸ್ತೂರು, ದುಂಡನಹಳ್ಳಿ ಸ್ಭೆರಿದಂತೆ ಇನ್ನಿತರ ಗ್ರಾಮಗಳಲ್ಲಿ ಶನಿವಾರ ಚುನಾವಣಾ ಪ್ರಚಾರ ಮಾಡಿದ ಅವರು, ಸ್ವಾರ್ಥಕ್ಕಾಗಿ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ, ನಿಮ್ಮ ಸೇವೆ ಮಾಡಲು ಸ್ಪರ್ಧೆ ಮಾಡಿದ್ದೇನೆ. ಚುನಾವಣೆಯಲ್ಲಿ ಗೆಲ್ಲಿಸಿದರೆ ಜೀವನ ಪರ್ಯಂತೆ ನಿಮ್ಮ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನೀಡಿರುವ ಕೊಡುಗೆ ಏನೆಂಬುದು ಎಲ್ಲರಿಗೂ ಗೋತ್ತಿದೆ. ರೈತರಿಗೆ ಹಾಗೂ ಕಾವೇರಿ ನದಿ ನೀರಿನ ಸಮಸ್ಯೆ ಉಂಟಾದಾಗ ಬೀದಿಗಿಳಿದು ಹೋರಾಟ ಮಾಡುವ ನಮ್ಮ ತಂದೆ ಮತ್ತು ತಾತಾ ಅವರ ಕೈ ಬಲಪಡಿಸಲು ನನ್ನನ್ನು ಗೆಲ್ಲಿಸಿಕೊಡಿ ಎಂದು ವಿನಂತಿ ಮಾಡಿದರು.

ಕುಮಾರಸ್ವಾಮಿ ಅವರು ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲೂ ಜಿಲ್ಲೆಯಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ಬಂದು ಮೃತಪಟ್ಟಾಗ ಮತ್ತು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಮನೆಗೆ ಆಗಮಿಸಿ ಧನ ಸಹಾಯ ಮಾಡಿ ರೈತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು. ಅಧಿಕಾರ ಇರಲಿ, ಇಲ್ಲದಿರಲಿ ನಿಮ್ಮ ಸೇವೆಯನ್ನು ನಾವು ನಿರಂತರವಾಗಿ ಮಾಡುತ್ತೇವೆ ಎಂದು ಅವರು ಹೇಳಿದರು.

ಸುಮಲತಾ, ಅಭಿಷೇಕ್‍ಗೆ ತಿರುಗೇಟು: ನನಗೆ ಅಂಬರೀಷ್ ಹೆಸರು ದುರ್ಬಳಕೆ ಮಾಡಿಕೊಂಡು ಮತ ಪಡೆಯುವ ಪರಿಸ್ಥಿತಿ ಇನ್ನೂ ಬಂದಿಲ್ಲ. ನನಗೆ ನಮ್ಮ ಅಪ್ಪ, ತಾತ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಸಾಕು. ಕುಮಾರಸ್ವಾಮಿ ಆಡಳಿತ ನೋಡಿಯೇ ಮಂಡ್ಯದ ಜನ ಏಳಕ್ಕೆ ಏಳು ಕ್ಷೇತ್ರ ಗೆಲ್ಲಿಸಿರುವುದು ಎಂದು ಸುಮಲತಾ, ಅಭಿಷೇಕ್ ಇಬ್ಬರಿಗೂ ನಿಖಿಲ್ ತಿರುಗೇಟು ನೀಡಿದರು.

ಮಧ್ಯಮದವರ ಮೇಲೆ ಅಸಮಾಧಾನ: ಕೊಟ್ಟಿಗೆ ಗೊಬ್ಬರ ಹಾಕಲೂ ನಮಗೆ ಜಾಗವಿಲ್ಲ. ಬೇರೆಯವರ ಜಾಗದಲ್ಲಿ ಹಾಕಿದ್ರೆ ಬೈತಾರೆ ಎಂದು ಹನುಮಂತಪುರ ಗ್ರಾಮದಲ್ಲಿ ನಿಖಿಲ್ ಬಳಿ ರೈತ ಮಹಿಳೆಯೊಬ್ಬರು ಕಷ್ಟ ಹೇಳಿಕೊಂಡರು. ಈ ಸಂದರ್ಭದಲ್ಲಿ ಚಿತ್ರೀಕರಿಸುತ್ತಿದ್ದ ಮಾಧ್ಯಮದವರ ಮೇಲೆ ನಿಖಿಲ್ ಅಸಮಧಾನಗೊಂಡರು.

ಇದನ್ನಷ್ಟೇ ಪದೇ ಪದೇ ತೋರಿಸುತ್ತೀರಿ. ಇಲ್ಲಿರುವ ಜನ, ಬೆಂಬಲ ಎಲ್ಲವನ್ನೂ ತೋರಿಸಲ್ಲ. ನಿನ್ನೆ ಕೆ.ಆರ್.ನಗರದಲ್ಲಿ ಮಹಿಳೆಯೊಬ್ಬರು ಸಚಿವರನ್ನು ಆತ್ಮೀಯತೆಯಿಂದ ಪದೇ ಪದೇ ತಮ್ಮ ಗ್ರಾಮಕ್ಕೆ ಭೇಟಿ ಕೊಡಿ ಅಂದಿದ್ದನ್ನೇ ತರಾಟೆ ಎಂಬ ರೀತಿ ತೋರಿಸಿದ್ದೀರಿ ಎಂದು ಅಸಮಾಧಾನ ಹೊರ ಹಾಕಿದರು.

ಸ್ಥಳೀಯ ಶಾಸಕ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಠಿಯಿಂದ ರೈತ ಹಾಗೂ ಜನಪರ ಕಾಳಜಿ ಇರುವ ನಿಖಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.

ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಮೈಸೂರು ವಿಭಾಗದ ಜೆಡಿಎಸ್ ವೀಕ್ಷಕ ಸಾದೊಳಲು ಸ್ವಾಮಿ, ಜೆಡಿಎಸ್ ತಾಲೂಕು ಯುವ ತಾಲೂಕು ಅಧ್ಯಕ್ಷ ಸಿ.ಟಿ.ಶಂಕರ್, ತಾಲೂಕು ಕಾರ್ಯಾಧ್ಯಕ್ಷ ಕೆ.ದಾಸೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಾಮನಹಳ್ಳಿ ಸ್ವಾಮಿ, ಗ್ರಾಪಂ ಅಧ್ಯಕ್ಷ ಗೋವಿಂದೇಗೌಡ, ಮಾಜಿ ಅಧ್ಯಕ್ಷ ಚಿಕ್ಕಂನಹಳ್ಳಿ ಮನು, ಮುಖಂಡರಾದ ಡಿ.ಟಿ.ಸಂತೋಷ್, ಕಾರ್ತಿಕ್ ಸಿದ್ದರಾಜು, ಜಗದೀಶ್, ಆನಂದ, ರಾಮಣ್ಣ , ರವಿ, ನಾಗರಾಜು, ರಂಗಸ್ವಾಮಿ ನಾರಾಯಣಸ್ವಾಮಿ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News