×
Ad

ಲೋಕಾಯುಕ್ತ ಜಾರಿಗೆ ಆಗ್ರಹಿಸಿದ ಪಕ್ಷವೇ ಸಂಸ್ಥೆಯ ಅಧಿಕಾರವನ್ನು ಕಸಿದುಕೊಂಡಿತು: ನ್ಯಾ.ಸಂತೋಷ್ ಹೆಗ್ಡೆ

Update: 2019-03-30 23:35 IST

ವಿಜಯಪುರ,ಮಾ.30: ಯಾವ ರಾಜಕೀಯ ಪಕ್ಷಗಳಿಗೂ ಸ್ವತಂತ್ರವಾದ ವಿಚಾರಣಾ ಸಂಸ್ಥೆ ಬೇಕಾಗಿಲ್ಲ. ಈ ಹಿಂದೆ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿದ ವರದಿಯನ್ನು ಜಾರಿಗೊಳಿಸುವಂತೆ ಪಾದಯಾತ್ರೆ ನಡೆಸಿದ ರಾಜಕೀಯ ಪಕ್ಷವೇ ನಂತರ ಅಧಿಕಾರಕ್ಕೆ ಬಂದಾಗ ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನೇ ಕಿತ್ತುಕೊಂಡು ಎಸಿಬಿಯನ್ನು ರಚನೆ ಮಾಡಿತು ಎಂದು ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆಕ್ಷೇಪ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತರಿಗೆ ನೀಡಲಾದ ಅಧಿಕಾರಗಳನ್ನೇ ಕಸಿದುಕೊಂಡು ಎಸಿಬಿ ರಚನೆ ಮಾಡಿ ಅನೇಕ ಅಧಿಕಾರಿಗಳನ್ನೇ ಕಿತ್ತುಕೊಂಡಿತು. ಒಬ್ಬ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರ ದೂರಿನ ಬಗ್ಗೆ ವಿಚಾರಣೆ ನಡೆಸಲು ಎಸಿಬಿ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕು, ಉದಾಹರಣೆಗೆ ಸಚಿವರೊಬ್ಬರ ವಿರುದ್ಧ ಕೇಳಿಬಂದ ಭ್ರಷ್ಟಾಚಾರವನ್ನು ತನಿಖೆ ನಡೆಸಲು ಸರ್ಕಾರದ ಅನುಮತಿ ಪಡೆದುಕೊಳ್ಳಬೇಕು, ಹಾಗಿದ್ದರೆ ಎಸಿಬಿ ವಿಚಾರಣೆ ನಡೆಸುವ ವಿಷಯ ಆ ಸಚಿವನಿಗೆ ಗೊತ್ತಾಗುವುದಿಲ್ಲವೇ? ಆದರೆ ಈ ಹಿಂದೆ ಲೋಕಾಯುಕ್ತ ಸಂಸ್ಥೆಗೆ ಇಂತಹ ಬಂಧನ ಇರಲಿಲ್ಲ ಎಂದರು.

ಆದರೆ ಲೋಕಾಯುಕ್ತ ವರದಿ ಜಾರಿಗೆ ಆಗ್ರಹಿಸಿದ ರಾಜಕೀಯ ಪಕ್ಷವೇ ತಾನು ಅಧಿಕಾರಕ್ಕೆ ಬಂದಾಗ ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನೇ ಕಸಿದುಕೊಂಡಿರುವುದು ಮಾತ್ರ ವಿಪರ್ಯಾಸ. ಇದನ್ನು ನೋಡಿದರೆ ಯಾವೊಂದು ರಾಜಕೀಯ ಪಕ್ಷಕ್ಕೂ ಸ್ವತಂತ್ರವಾದ ವಿಚಾರಣೆ ಸಂಸ್ಥೆ ಅಸ್ತಿತ್ವದಲ್ಲಿರಲು ಇಷ್ಟವಿಲ್ಲದಂತೆ ತೋರುತ್ತದೆ ಎಂದು ಸಂತೋಷ್್ ಹೆಗಡೆ ಹೇಳಿದರು. 

ಲೋಕಾಯುಕ್ತರ ಅಧಿಕಾರವನ್ನು ಎಸಿಬಿಗೆ ವರ್ಗಾವಣೆ ಮಾಡಿದ್ದು, ಜನರ ಹಿತಾಸಕ್ತಿಯಿಂದ ಅಲ್ಲ. ಎಸಿಬಿ ಸೃಷ್ಟಿ ಮಾಡಿದ ಸರ್ಕಾರ ಜನತೆಗೆ ಏನು ಸಂದೇಶ ನೀಡಿದೆ ಎಂದು ಪ್ರಶ್ನಿಸಿದರು. ಈ ಹಿಂದೆ ಇದ್ದ ಲೋಕಾಯುಕ್ತ ಯಾವ ವಿಷಯದಲ್ಲಿ ಕಡಿಮೆ ಇತ್ತು. ಮುಖ್ಯಮಂತ್ರಿಗಳ ಮೇಲೆ, ಪ್ರಭಾವಿ ಮಂತ್ರಿಗಳ ಮೇಲೆಯೂ ವಿಚಾರಣೆ ನಡೆಸಿದ ನಿದರ್ಶನವಿಲ್ಲವೇ? ಎಂದು ಪ್ರಶ್ನಿಸಿದರು. ಕೂಡಲೇ ಲೋಕಾಯುಕ್ತಕ್ಕೆ ಈ ಹಿಂದೆ ಇದ್ದ ಅಧಿಕಾರ ಕೊಡಿ ಎಂದು ಒತ್ತಾಯಿಸಿದರು. 

ಎಸಿಬಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನವುದು ನಿಜ. ಆದರೆ ಎಸಿಬಿಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಆದರೆ ಅವರಿಗೆ ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಪ್ರತಿಯೊಂದು ವಿಷಯಕ್ಕೂ ಸರ್ಕಾರಕ್ಕೆ ಪರ್ಮಿಷನ್ ಕೇಳಬೇಕಿರುವಾಗ ಎಸಿಬಿ ಅಧಿಕಾರಿಗಳು ಯಾವ ರೀತಿಯಾಗಿ ಉತ್ತಮವಾಗಿ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ನೋಟಾ ಚಲಾಯಿಸಿಯಾದರೂ ಪ್ರತಿಭಟಿಸಿ
ಮತ ಚಲಾವಣೆ ಪ್ರತಿಯೊಬ್ಬ ಹಕ್ಕು ಹಾಗೂ ಕರ್ತವ್ಯ. ಮತ ಚಲಾಯಿಸದ ವ್ಯಕ್ತಿಗೆ ದೇಶದ ವ್ಯವಸ್ಥೆ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಯಾವುದೇ ಹಕ್ಕು ಇಲ್ಲವೇ ಇಲ್ಲ. ಜಾತಿ, ಧರ್ಮದ ಆಧಾರದ ಮೇಲೆ ಮತ ಚಲಾಯಿಸಬೇಡಿ. ಕುರುಡುತನದಿಂದ ರಾಜಕೀಯ ಪಕ್ಷಕ್ಕೂ ಮತಚಲಾಯಿಸದೇ ನೀವು ಇರುವ ಕ್ಷೇತ್ರದ ಪ್ರಗತಿಗೆ ಯಾರು ಅಭಿವೃದ್ಧಿ ಪರವಾದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾರೋ ಅಂತಹ ವ್ಯಕ್ತಿಗೆ ಮತ ಚಲಾಯಿಸಿ. ಒಂದು ವೇಳೆ ನಿಮ್ಮ ಕ್ಷೇತ್ರದಲ್ಲಿ ಯಾವೊಬ್ಬ ಅಭ್ಯರ್ಥಿಯೂ ಸೂಕ್ತವಲ್ಲ ಎನ್ನುವುದಾದರೆ ನೋಟಾ ಚಲಾಯಿಸಿ, ನೋಟಾ ಮೂಲಕವಾದರೂ ತಮ್ಮ ಹಕ್ಕು ಚಲಾಯಿಸಿ ಪ್ರತಿಭಟನೆ ಮಾಡಿ ಎಂದರು.

ಒಂದು ಕ್ಷೇತ್ರದಲ್ಲಿ ಆಯಾ ಅಭ್ಯರ್ಥಿಗಳಿಗಿಂತ ನೋಟಾ ಮತಗಳು ಹೆಚ್ಚಾಗಿ ಚಲಾವಣೆಯಾಗಿದ್ದರೆ ಅಂತಹ ಮತಕ್ಷೇತ್ರದಲ್ಲಿ ಮರು ಚುನಾವಣೆ ನಡೆಯಬೇಕು. ಈ ಹಿಂದೆ ಕಣದಲ್ಲಿದ್ದ ಅಭ್ಯರ್ಥಿಗಳು ಅನರ್ಹವಾಗಬೇಕು, ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅವಕಾಶ ನೀಡಬಾರದು, ಇಂತಹದೊಂದು ಬದಲಾವಣೆ ನಿಜಕ್ಕೂ ಮೂಡಿಬರಬೇಕಾಗಿದೆ ಎಂದು ಸಂತೋಷ್್ ಹೆಗಡೆ ಆಶಯ ವ್ಯಕ್ತಪಡಿಸಿದರು.  

ಆಡಲು ಬಾರದವರು ಬ್ಯಾಟ್ ಚೆನ್ನಾಗಿಲ್ಲ ಎಂದಂತೆ
ಇವಿಎಂ ಮಷೀನ್‍ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಅವುಗಳ ಪಾರದರ್ಶಕತೆಯ ಬಗ್ಗೆ ಅನುಮಾನ ಮೂಡಿ ಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಂತೋಷ್್ ಹೆಗಡೆ ಅವರು, ಈ ಹಿಂದೆಯೂ ಇವಿಎಂನಲ್ಲಿಯೇ ಚುನಾವಣೆ ನಡೆದಿದೆ, ಇವಿಎಂ ಮಷೀನ್‍ಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ ರಾಜಕೀಯ ಪಕ್ಷವೂ ಜಯ ಗಳಿಸಿದೆ. ಈಗ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸುವುದು ಆಧಾರ ರಹಿತ. ಆಡಲು ಬಾರದವರು ಬ್ಯಾಟ್ ಚೆನ್ನಾಗಿಲ್ಲ ಎಂದಂತೆ ಎಂದು ವ್ಯಂಗ್ಯವಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News