ಐಟಿ ದಾಳಿ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿದ್ದು ಸರಿಯಲ್ಲ: ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ
ವಿಜಯಪುರ,ಮಾ.30: ಐಟಿ ಕಾರ್ಯಾಚರಣೆ ನಡೆದಿರುವುದು ಕಾನೂನಿನ ದೃಷ್ಟಿಯಲ್ಲ ತಪ್ಪಿಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ನಡೆದ ಕಾರ್ಯಾಚರಣೆಯನ್ನು ಸಾಂವಿಧಾನಿಕವಾಗಿ ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಐಟಿ ಕಾರ್ಯಾಚರಣೆ ವಿರೋಧಿಸಿ ಸಾರ್ವಜನಿಕವಾಗಿ ಪ್ರತಿಭಟನೆಗೆ ಮುಂದಾಗಿರುವುದು ಸರಿಯಲ್ಲ ಎಂದು ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಟಿ ಕಾರ್ಯಾಚರಣೆ ಕಾನೂನಿನ ದೃಷ್ಟಿಯಲ್ಲ ತಪ್ಪಿಲ್ಲ. ಸಂವಿಧಾನದ ಚೌಕಟ್ಟಿಯಲ್ಲಿ ನಡೆದ ಕಾರ್ಯಾಚರಣೆಯನ್ನು ಈ ಹಿಂದೆ ಇನ್ನೊಂದು ರಾಜ್ಯದ ಮುಖ್ಯಮಂತ್ರಿಯೊಬ್ಬರು ಪ್ರತಿಭಟಿಸಿ ಬೀದಿಗಳಿದು ಹೋರಾಟ ಮಾಡಿದ್ದರು. ಅದನ್ನೇ ಮಾದರಿಯಾಗಿರಿಸಿಕೊಂಡು ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ಬೀದಿಗಿಳಿದು ಪ್ರತಿಭಟನೆ ಮಾಡಿರುವುದು ಸರಿಯಲ್ಲ.
ಚುನಾವಣೆ ಬಂದಾಗಲೇ ಈ ರೀತಿ ಐಟಿ ದಾಳಿ ನಡೆಯುತ್ತವೆ, ಅವರ ಮೇಲೆ ಏಕೆ ದಾಳಿಯಾಗುವುದಿಲ್ಲ ಎಂಬ ಪ್ರಶ್ನೆಗಳು ನಿರರ್ಥಕ. ಕೊಲೆ ಮಾಡಿರುವ ವ್ಯಕ್ತಿಯೊಬ್ಬನನ್ನು ಬಂಧಿಸಲು ಬಂದಾಗ, ಆ ವ್ಯಕ್ತಿ ಇನ್ನೊಬ್ಬರು ಕೊಲೆ ಮಾಡಿದ್ದಾರೆ ಅವರನ್ನು ಬಂಧಿಸಿ ಎಂದರೆ ಸರಿಯೇ? ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ತಪ್ಪು ಮಾಡಿದರೆ ಅಂಜಿಕೆ ಏಕೆ? ಒಂದು ವೇಳೆ ಅದು ಅನ್ಯಾಯವೇ ಆಗಿದ್ದಲ್ಲಿ ಅದನ್ನು ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಬೇಕಿತ್ತು. ಕೋರ್ಟ್ ಮೆಟ್ಟಿಲೇರಿ ಅದನ್ನು ಪರಿಹರಿಸಿಕೊಳ್ಳಬಹುದಾಗಿತ್ತು. ಅದನ್ನು ಬಿಟ್ಟು ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿದ್ದು ಸರಿಯಲ್ಲ ಎಂದರು.
ಹಲವಾರು ದಶಕಗಳ ನಂತರ ಲೋಕಪಾಲ ಕಾಯ್ದೆ ಅನುಷ್ಠಾನಕ್ಕೆ ಬಂದಂತಾಗಿದೆ. ಚುನಾವಣೆ ಹಿನ್ನೆಲೆಯಲ್ಲಿಯೇ ಏಕೆ ಲೋಕಪಾಲ ರಚನೆಯಾಗಿದೆ ಎಂಬ ಕೂಗು ಇದೆ, ಆದರೆ ಸುಪ್ರೀಂಕೋರ್ಟ್ ಲೋಕಪಾಲ ಕಾಯ್ದೆ ಜಾರಿಗೊಳಿಸಲೇಬೇಕು ಎಂಬ ಗಡುವಿನ ಹಿನ್ನೆಲೆಯಲ್ಲಿ ಲೋಕಪಾಲ ಜಾರಿಯಾಗಿದೆ ಎಂದು ಇನ್ನೊಬ್ಬರು ವಾದ ಮಂಡಿಸುತ್ತಲೇ ಇದ್ದಾರೆ. ಅದೇನೆ ಇರಲಿ ಲೋಕಪಾಲ ಜಾರಿಯಾಗಿದ್ದು ಮಾತ್ರ ಸಂತೋಷದ ಸಂಗತಿ. ಲೋಕಪಾಲ ಸಂಸ್ಥೆಯ ಬಲ-ದುರ್ಬಲದ ಬಗ್ಗೆ ತಕ್ಷಣದಲ್ಲಿಯೇ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ, ರಾಜಕೀಯ ಒತ್ತಡಕ್ಕೆ ಮಣಿಯದೇ ಈ ಸಂಸ್ಥೆ ಕಾರ್ಯನಿರ್ವಹಿಸಬೇಕು. ಮೊದಲು ಈ ಸಂಸ್ಥೆ ಜನರ ಪ್ರೀತಿಯನ್ನು ಗಳಿಸಬೇಕಿದೆ, ನಂತರ ಈ ಸಂಸ್ಥೆ ಪ್ರಧಾನಮಂತ್ರಿಗೂ ವಿಚಾರಣೆಗೊಳಪಡಿಸುವ ಅಧಿಕಾರವನ್ನು ಪಡೆದುಕೊಳ್ಳಬಹುದಾಗಿದೆ, ಈ ಸಂಸ್ಥೆಯ ಮೇಲೆ ಸಾರ್ವಜನಿಕರ ವಿಶ್ವಾಸವಿದ್ದರೆ ಸರ್ಕಾರಗಳು ಸಹ ಜನಾದೇಶಕ್ಕೆ ತಲೆದೂಗಬೇಕಾಗುತ್ತದೆ ಎಂದರು.