×
Ad

ಯಾವುದೇ ಕೆಲಸ ಮಾಡದ ಬಿಜೆಪಿ ಅಭ್ಯರ್ಥಿ ಮೋದಿ ಹೆಸರಲ್ಲಿ ಓಟು ಕೇಳುತ್ತಿದ್ದಾರೆ: ವಿಜಯಪುರ ಮೈತ್ರಿ ಅಭ್ಯರ್ಥಿ ಡಾ.ಸುನೀತ

Update: 2019-03-30 23:55 IST

ವಿಜಯಪುರ,ಮಾ.30: ನನ್ನ ಹೆಸರು ಮೇಲೆ ವೋಟು ಕೇಳುತ್ತಿಲ್ಲ, ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ವೋಟು ಕೇಳುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿಕೊಂಡಿದ್ದಾರೆ. ಈ ಮಾತಿನಿಂದಲೇ ಅವರು ಯಾವುದೇ ಕೆಲಸ ಎಂಬುದು ತೋರುತ್ತದೆ. ಅವರು ಈ ಚುನಾವಣೆಯಲ್ಲಿ ಸೋಲುವುದು ನಿಶ್ಚಿತ ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಡಾ.ಸುನೀತಾ ಚವ್ಹಾಣ ಹೇಳಿದರು.

ಶನಿವಾರ ಜೆಡಿಎಸ್ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಓಟು ಕೇಳುತ್ತೇನೆ ಎಂದು ಹೇಳಿರುವ ಜಿಗಜಿಣಗಿ ಅವರ ಹೇಳಿಕೆಯೇ ಅವರು ಏನೂ ಕೆಲಸ ಮಾಡಿಲ್ಲ ಎಂಬುದನ್ನು ಒಪ್ಪಿಕೊಂಡಂತಿದೆ ಎಂದರು. 

ಬಹಳ ವರ್ಷಗಳಿಂದ ಮಹಿಳೆಯರಿಗೆ ಪ್ರಾತಿನಿಧ್ಯ ದೊರಕಿರಲಿಲ್ಲ. ಈಗ ಜೆಡಿಎಸ್ ಮಹಿಳೆಗೆ ಅವಕಾಶ ನೀಡಿದೆ, ಮೈತ್ರಿ ಪಕ್ಷ ಕಾಂಗ್ರೆಸ್ ಸಹ ಇದಕ್ಕೆ ಸಂಪೂರ್ಣವಾಗಿ ಸಹಕರಿಸಿದ್ದು, ಎರಡು ಪಕ್ಷಗಳ ಮುಖಂಡರು ಗೆಲುವಿಗೆ ಸಂಕಲ್ಪ ಮಾಡಿದ್ದು, ಗೆಲುವು ನಿಶ್ಚಿತವಾಗಿದೆ ಎಂದರು. 

ಜನತೆ ಈ ಬಾರಿ ನನಗೆ ಆಶೀರ್ವದಿಸಿದರೆ ವಿಜಯಪುರ ಸಂಸದೆಯಾಗಿ ವಿಜಯಪುರ ವಿಮಾನ ನಿಲ್ದಾಣ, ಕೈಗಾರಿಕಾ ಪ್ರದೇಶಗಳ ನಿರ್ಮಾಣ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. 

ಎಲೆಕ್ಷನ್ ಸಮಯದಲ್ಲಿ ಮಾತ್ರ ಹಾಜರು
ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ ಮಾತನಾಡಿ, ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚುನಾವಣೆ ಸಮಯದಲ್ಲಿ ಮಾತ್ರ ಹೊರಬರುತ್ತಾರೆ. ಎರಡು ಬಾರಿ ವಿಜಯಪುರವನ್ನು ಸಂಸತ್‍ನಲ್ಲಿ ಪ್ರತಿನಿಧಿಸಿದರೂ ವಿಜಯಪುರ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಇದು ಅವರ ಸೋಲಿಗೆ ಕಾರಣವಾಗಲಿದೆ ಎಂದು ಭವಿಷ್ಯ ನುಡಿದರು.

ಕಳೆದ 10 ವರ್ಷಗಳ ಅವಧಿಯಲ್ಲಿ ವಿಜಯಪುರ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡು ಜನತೆಗೆ ಅನುಕೂಲ ಕಲ್ಪಿಸಬಹುದಾಗಿತ್ತು. ಆದರೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ, ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಹೊರಬರುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಅವರು ಸೋಲು ಖಚಿತವಾಗಿದ್ದು, ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದರು.

ಡಾ.ಸುನೀತಾ ಚವ್ಹಾಣ ಅವರಿಗೆ ಟಿಕೆಟ್ ನೀಡಿದ್ದು ಕುಟುಂಬ ರಾಜಕಾರಣವಲ್ಲ. ವಿಠ್ಠಲ ಕಟಕದೊಂಡ ಸೇರಿದಂತೆ ಹಲವಾರು ನಾಯಕರಿಗೆ ಸ್ಪರ್ಧೆ ಮಾಡುವಂತೆ ಕೋರಲಾಗಿತ್ತು, ಆದರೆ ಯಾರೂ ಒಪ್ಪಲಿಲ್ಲ, ನಾನು ನನ್ನ ಧರ್ಮಪತ್ನಿಗೆ ಟಿಕೆಟ್ ನೀಡಿ ಎಂದು ಆಗ್ರಹ ಮಾಡಲಿಲ್ಲ, ಇದು ಹೈಕಮಾಂಡ್ ನಿರ್ಧಾರ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಸಹ ಇದಕ್ಕೆ ದನಿಗೂಡಿಸಿ, ಮೈತ್ರಿ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ನಿರ್ಧಾರ ಎಂದರು. 

ಮಾ.4 ರಂದು ನಾಮಪತ್ರ ಸಲ್ಲಿಕೆ
ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಮಾ.2 ರಂದು ಸಾಂಕೇತಿಕವಾಗಿ ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಮಾರ್ಚ್ 4 ರಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರ ಸಮ್ಮುಖದೊಡನೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು. ಬಿಜೆಪಿಯಲ್ಲಿ ಆಂತರಿಕ ಕಚ್ಚಾಟವಿದೆ. ಬಿಜೆಪಿ ಅಭ್ಯರ್ಥಿಯ ಪರವಾಗಿ ಅವರ ಪಕ್ಷದಲ್ಲಿಯೇ ಅಪಸ್ವರ ಮನೆ ಮಾಡಿದೆ. ಈ ಅಪಸ್ವರ ಅವರ ಸೋಲಿಗೆ ಕಾರಣವಾಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಮಾತನಾಡಿ, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್ ವರಿಷ್ಠ ನಾಯಕ ಎಚ್.ಡಿ. ದೇವೆಗೌಡ ಸೇರಿದಂತೆ ಅನೇಕ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ. ಕಾಂಗ್ರೆಸ್ ಪಕ್ಷದ ಸಚಿವರು, ಹಿರಿಯ ನಾಯಕರು ಸಹ ಭಾಗವಹಿಸಲಿದ್ದಾರೆ ಎಂದರು.
ದಿಲಾವರ ಖಾಜಿ, ವಿದ್ಯಾ ಪಾಟೀಲ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News