ನಿಖಿಲ್ ನಾಮಪತ್ರ ಸಲ್ಲಿಸುವ ದಿನ ವಿದ್ಯುತ್ ಕಡಿತ ಮಾಡದಂತೆ ಎಸ್ ಪಿ ಮೂಲಕ ಆದೇಶ: ಸುಮಲತಾ ಗಂಭೀರ ಆರೋಪ

Update: 2019-03-31 06:33 GMT

ಮಂಡ್ಯ, ಮಾ.31: ತಾನು ನಾಮಪತ್ರ ಸಲ್ಲಿಸುವ ದಿನ  ಮಂಡ್ಯದಲ್ಲಿ ವಿದ್ಯುತ್  ಕಡಿತ ಮಾಡಲಾಗಿತ್ತು. ಟಿವಿ ಕೇಬಲ್ ಕಟ್ ಮಾಡಲಾಗಿತ್ತು .ಆದರೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವ ದಿನ  ವಿದ್ಯುತ್ ಕಡಿತ ಮಾಡುವಂತಿಲ್ಲ ಎಂದು ಎಸ್ ಪಿ ಮೂಲಕ ಅಧಿಕೃತ  ಆದೇಶ ನೀಡಲಾಗಿತ್ತು ಎಂದು ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗಂಭೀರ  ಆರೋಪ ಮಾಡಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಡ್ಯದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಮತ್ತು ಅಸಂವಿಧಾನಿಕ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ಪಕ್ಷೇತರ ಅಭ್ಯರ್ಥಿಯಾದ ತನಗೊಂದು ನ್ಯಾಯ ಮತ್ತು ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ  ಹಾಗೂ  ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ  ಇನ್ನೊಂದು ನ್ಯಾಯ ಯಾಕೆ ? ಈ ವಿಚಾರದಲ್ಲಿ ತನಗೆ ಅನ್ಯಾಯವಾಗಿದೆ. ನ್ಯಾಯ ಒದಗಿಸುವಂತೆ ಸುಮಲತಾ ಒತ್ತಾಯಿಸಿದರು.

ಇಂದು ಕೂಡಾ ತನ್ನ ಸುದ್ದಿಗೋಷ್ಠಿಯ ಜನತೆ ಗೊತ್ತಾಗದಂತೆ ಮಾಡಲು ಕೇಬಲ್ ಕಟ್ ಮಾಡಲಾಗಿದೆ. ಬೇಕಿದ್ದರೆ ಮಾಧ್ಯಮದವರೇ ಈ ಬಗ್ಗೆ ತಪಾಸಣೆ ಮಾಡಿ ಸತ್ಯಾಸತ್ಯತೆ ತಿಳಿದುಕೊಳ್ಳಿ  ಎಂದು ಹೇಳಿದರು.

 ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವಾಗ ನಾಮಪತ್ರದ ಕಾಲಂಗಳನ್ನು ಸಮಪರ್ಕವಾಗಿ  ಭರ್ತಿ ಮಾಡಿರಲಿಲ್ಲ. ಹಳೆಯ ಮಾದರಿಯಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಆದರೆ ನಾಮಪತ್ರ ಪರಿಶೀಲನೆಗೂ ಮೊದಲೇ ಅವರ ನಾಮಪತ್ರ ಮತ್ತು ಅಫಿಡವಿಟ್  ಸರಿಯಾಗಿಲ್ಲ ಎಂದು ಆಕ್ಷೇಪ ಸಲ್ಲಿಸಿದ್ದೆವು. ಆದರೆ ಬಳಿಕ ನಿಖಿಲ್ ಗೆ ನಾಮಪತ್ರವನ್ನು ಸರಿಪಡಿಸಲು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮಂಜುಶ್ರೀ ಅವರು ಅವಕಾಶ ನೀಡಿದರು. ನಾಮಪತ್ರ ಪರಿಶೀಲನೆ ವೇಳೆ ನಮ್ಮ ಆಕ್ಷೇಪವನ್ನು  ಚುನಾವಣಾಧಿಕಾರಿ ತಿರಸ್ಕರಿಸಿ  ನಿಖಿಲ್ ನಾಮಪತ್ರ ಅಂಗೀಕಾರವಾಗಿದೆ ಎಂದು ಘೋಷಿಸಿದರು ಎಂದು ಸುಮಲತಾರ ಚುನಾವಣಾ ಏಜೆಂಟ್ ಮದನ್ ಕುಮಾರ್ ಹೇಳಿದರು.

ನಾವು ಈ ಬಗ್ಗೆ  ನೀಡಿದ್ದ ದೂರನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್  ಗಂಭೀರ ವಾಗಿ ಪರಿಗಣಿಸಿದ್ದರೂ, ಇದೀಗ ನಿಖಿಲ್ ಕುಮಾರ ಸ್ವಾಮಿಗೆ ಕ್ಲೀನ್ ಚಿಟ್ ನೀಡಿದ್ದಾರೆ  ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News