ಲೋಕಸಭೆ ಚುನಾವಣೆ ಬಳಿಕ ಮೈತ್ರಿ ಸರಕಾರ ಪತನ: ಕೆ.ಎಸ್.ಈಶ್ವರಪ್ಪ
ಹುಬ್ಬಳ್ಳಿ, ಮಾ. 31: ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ತನ್ನ ನಡುವಿನ ಕಚ್ಚಾಟದಿಂದ ತಾನಾಗಿಯೇ ಪತನಗೊಳ್ಳಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವೆ ಅಸಮಾಧಾನ ಹೊಗೆಯಾಡುತ್ತಿದೆ. ಇನ್ನೂ ಕಾರ್ಯಕರ್ತರು ಈ ಅಪವಿತ್ರ ಮೈತ್ರಿ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದಿದ್ದು, ಇದು ತಾರಕ್ಕೇರಿ ಲೋಕಸಭಾ ಚುನಾವಣೆ ನಂತರ ಸರಕಾರ ಉರುಳಲಿದೆ ಎಂದರು.
ಹಿಂ.ವರ್ಗಗಳ ನಾಯಕ ತಾನೆಂದು ಬಿಂಬಿಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆ ವರ್ಗದ ಅಭಿವೃದ್ಧಿಗೆ ಏನು ಮಾಡಲಿಲ್ಲ. ತುಮಕೂರು, ಮೈಸೂರು ಸೇರಿದಂತೆ ವಿವಿಧೆಡೆ ಮೈತ್ರಿ ಅಭ್ಯರ್ಥಿಗಳು ಸೋಲುತ್ತಾರೆಂಬ ಭೀತಿ ಇವರಿಗೆ ಕಾಡುತ್ತಿದೆ. ಅವರವರೆ ಕಾಲೆಳೆದುಕೊಂಡು ಸೋಲುವ ಭೀತಿ ಆವರಿಸಿದೆ ಎಂದು ಲೇವಡಿ ಮಾಡಿದರು.
ಕೇಂದ್ರದ ಬಿಜೆಪಿ ಸರಕಾರ ಎಲ್ಲ ವರ್ಗ, ಸಮುದಾಯಗಳ ಏಳಿಗೆಗೆ ಶ್ರಮಿಸಿದೆ. ಆರೋಗ್ಯ, ಭದ್ರತೆ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ‘ಸಬ್ ಕೇ ಸಾಥ್, ಸಬ್ ಕೇ ವಿಕಾಸ್’ ಎಂಬ ಧ್ಯೇಯದೊಂದಿಗೆ ಪ್ರಧಾನಿ ಮೋದಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಅದೆ ಬಿಜೆಪಿಗೆ ಶ್ರೀರಕ್ಷೆಯಾಗಲಿದೆ ಎಂದರು.