ಗುರುತಿನ ಚೀಟಿ ತಮ್ಮ ಬಳಿಯೆ ಇಟ್ಟುಕೊಳ್ಳಬೇಕು: ಮತದಾರರಿಗೆ ಸಂಜೀವ್‌ ಕುಮಾರ್ ಸಲಹೆ

Update: 2019-03-31 11:53 GMT

ಬೆಂಗಳೂರು, ಮಾ. 31: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಅಧಿಕಾರಿ/ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಅಯೋಜಿಸಿದ್ದ ಮತದಾನ ಜಾಗೃತಿ ಬೀದಿ ನಾಟಕ ‘ಚುನಾವಣೆ ಸಮಯ’ ಎಂಬ ಸಾಮಾಜಿಕ ನಾಟಕ ಪ್ರದರ್ಶನ, ಮತದಾನ ಜಾಗೃತಿ ಜಾಥಾಕ್ಕೆ ಮುಖ್ಯ ಚುನಾವಣಾಧಿಕಾರಿಗಳು ಚಾಲನೆ ನೀಡಿದರು.

ರವಿವಾರ ಇಲ್ಲಿನ ಲಾಲ್‌ಬಾಗ್‌ನಲ್ಲಿ ಏರ್ಪಡಿಸಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾರರ ಜಾಗೃತಿ ಕಾರ್ಯವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಇದರಿಂದಾಗಿ ಮತದಾನದಲ್ಲಿ ಜಾಗೃತಿ ಉಂಟಾಗಿ ಹೆಚ್ಚು ಮತದಾನ ಆಗಲಿಕ್ಕೆ ಸಹಕಾರಿ ಎಂದರು.

ಅಲ್ಲದೆ, ಇಂತಹ ನಾಟಕಗಳ ಪ್ರದರ್ಶನವನ್ನು ಹೆಚ್ಚಾಗಿ ನಗರದ ಕೊಳಚೆ ಪ್ರದೇಶಗಳಲ್ಲಿ ಹಮ್ಮಿಕೊಂಡು ಹೆಚ್ಚು-ಹೆಚ್ಚು ಜಾಗೃತಿ ಉಂಟು ಮಾಡಬೇಕೆಂದು ತಿಳಿಸಿದರು. ನಾಗರಿಕರು ತಮ್ಮ ಬಳಿಯೇ ಗುರುತಿನ ಚೀಟಿಗಳನ್ನು ಇಟ್ಟು ಕೊಳ್ಳಬೇಕೆಂದು ಸೂಚಿಸಿದರು.

ಕಳೆದ ಬಾರಿ ಒಂದೇ ಕಡೆ 7500 ಗುರುತಿನ ಚೀಟಿ ಸಿಕ್ಕಿದ್ದು, ಅವುಗಳನ್ನು ಮುಟ್ಟುಗೊಲು ಹಾಕಿಕೊಳ್ಳಲಾಗಿದ್ದು, ಈ ರೀತಿಯ ಅವಘಡಗಳು ಸಂಭವಿಸಬಾರದು. ಈ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಈ ರೀತಿಯ ಜಾಗೃತಿ ಕಾರ್ಯಕ್ರಮ ಬೆಂಗಳೂರಿನದ್ಯಾಂತ ನಡೆಯುತ್ತಿದ್ದು, ಗುರುತಿನ ಚೀಟಿಗಳನ್ನು ಮತದಾರರು ತಮ್ಮ ಬಳಿ ಇಟ್ಟುಕೊಳ್ಳಬೇಕು. ನಗರದ 700ಕ್ಕೂ ಹೆಚ್ಚು ಕೊಳಚೆ ಪ್ರದೇಶಗಳಲ್ಲಿ ಇಂತಹ ಜಾಗೃತಿ ಕಾರ್ಯಗಳ ಮೂಲಕ ಅರಿವು ಮೂಡಿಸಲಾಗುವುದು ಎಂದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಮಾತನಾಡಿ, ಈ ಸಾಲಿನ ಚುನಾವಣಾ ಅವಧಿ ರಜೆಗಳ ಮಧ್ಯೆ ಬಂದಿದ್ದು, ಬಹುತೇಕರು ರಜೆ ಅವಧಿ ಉಪಯೋಗಿಸಿಕೊಂಡು ಬೇರೆ ಕಡೆ ಪ್ರಯಾಣ ಮಾಡಲು ಬಯಸುತ್ತಿರುವುದು ದುರದೃಷ್ಟಕರ. ಅಂತಹವರು ಮತ್ತೊಮ್ಮೆ ಯೋಚಿಸಿ ಮತದಾನದ ಮಹತ್ವ ಅರಿತು ಮತದಾನ ಮಾಡಬೇಕೆಂದು ಸಲಹೆ ಮಾಡಿದರು.

ಅನಂತರ ಹಾಸ್ಯನಟರಾದ ಡಿಂಗ್ರಿ ನಾಗರಾಜ್, ಮೂಗು ಸುರೇಶ್, ರೇಖಾ ದಾಸ್ ಸೇರಿದಂತೆ ಇನ್ನಿತರರು ಮತದಾನ ಜಾಗೃತಿ ಮುಖಾಂತರ ಹೆಚ್ಚಿನ ಮತದಾನವಾದರೆ ನಮ್ಮ ಪ್ರಯತ್ನ ಸಾರ್ಥಕವೆಂದರು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಅಧಿಕಾರಿ/ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್‌ರಾಜ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News