ರಾಜ್ಯ ಸರಕಾರದಿಂದ ಚುನಾವಣಾ ಅಧಿಕಾರಿಗಳ ದುರ್ಬಳಕೆ: ಎಸ್.ಪ್ರಕಾಶ್
ಬೆಂಗಳೂರು, ಮಾ.31: ರಾಜ್ಯ ಸರಕಾರ ಚುನಾವಣಾ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಇದೀಗ ಸ್ಪಷ್ಟವಾಗಿ ಬಯಲಾಗಿದೆ. ಜಿಲ್ಲಾಧಿಕಾರಿಗಳು ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಾಸನ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದು ಬಿಜೆಪಿ ಸಹ ವಕ್ತಾರ ಎಸ್.ಪ್ರಕಾಶ್ ತಿಳಿಸಿದರು.
ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಾಗೆಯೇ, ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ, ಮುಖ್ಯಮಂತ್ರಿ ಆದೇಶದ ಮೇರೆಗೆ ನಿಖಿಲ್ ಕುಮಾರಸ್ವಾಮಿ ನಾಮಪತ್ರವನ್ನು ಕಾನೂನು ಬಾಹಿರವಾಗಿ ಸಿಂಧುಗೊಳಿಸಿ, ಇದನ್ನು ಪ್ರಶ್ನೆ ಮಾಡಿದ ಅವರ ಪ್ರತಿಸ್ಪರ್ಧಿ ಸುಮಲತಾ ಅಂಬರೀಷ್‌ಗೆ ನೋಟಿಸ್ ನೀಡುವ ಉದ್ಘಟತನ ತೋರಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಮುಖ್ಯ ಚುನಾವಣಾಧಿಕಾರಿ, ಈ ಪ್ರಕರಣವನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ತಿಳಿಸಿರುವ ಹಿನ್ನೆಲೆಯಲ್ಲಿ, ನಿಷ್ಪಕ್ಷಪಾತ ಚುನಾವಣೆ ನಡೆಸಲು ಮಂಡ್ಯ ಜಿಲ್ಲಾಧಿಕಾರಿಯನ್ನು ಈ ಕೂಡಲೇ ವರ್ಗಾವಣೆ ಮಾಡಬೇಕು. ಹೊರ ರಾಜ್ಯದ ಜಿಲ್ಲಾಧಿಕಾರಿಯನ್ನು ಜಿಲ್ಲೆಗೆ ನೇಮಕ ಮಾಡಬೇಕು. ಮಂಡ್ಯ ಕ್ಷೇತ್ರವನ್ನು ಅತೀ ಸೂಕ್ಷ್ಮ ಕ್ಷೇತ್ರವೆಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.
ನಿಖಿಲ್ ಕುಮಾರಸ್ವಾಮಿಗೆ ವೋಟ್ ಹಾಕದಿದ್ದರೆ ದೇವರು ಒಳ್ಳೆಯದು ಮಾಡಲ್ಲ ಎಂದು ಸಚಿವ ತಮ್ಮಣ್ಣ ಬೇಕಾಬಿಟ್ಟಿ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಮತದಾರರಿಗೆ ಬೆದರಿಕೆ ಹಾಕುವ ತಂತ್ರ ಅನುಸರಿಸುತ್ತಿದ್ದಾರೆ. ಚುನಾವಣಾ ಆಯೋಗವು ಇವರು ಪದೇ ಪದೇ ನೀಡುತ್ತಿರುವ ಆಕ್ಷೇಪಾರ್ಹ ಬೇಜವಾಬ್ದಾರಿ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ, ತೆಗೆದುಕೊಂಡು ಕೂಡಲೇ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಕಾಶ್ ಆಗ್ರಹಿಸಿದರು.
ಬಿಜೆಪಿ ಸಹ ವಕ್ತಾರ ಎ.ಎಚ್.ಆನಂದ್ ಮಾತನಾಡಿ, ಭ್ರಷ್ಟ ಅಧಿಕಾರಿಗಳ ಮೇಲೆ ಮತ್ತು ಗುತ್ತಿಗೆದಾರರ ಮೇಲೆ ಐಟಿ ಇಲಾಖೆಯಿಂದ ನಡೆಯುತ್ತಿರುವ ದಾಳಿಯನ್ನು ನಿಲ್ಲಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬರೆದಿರುವ ಪತ್ರ ಅತ್ಯಂತ ಖಂಡನಾರ್ಹ ಹಾಗೂ ತಲೆ ತಗ್ಗಿಸಬೇಕಾದ ವಿಚಾರವಾಗಿದೆ ಎಂದರು.
ಚುನಾವಣೆಯಲ್ಲಿ ಅಕ್ರಮ ಹಣದ ಪ್ರಭಾವವನ್ನು ಕಡಿತಗೊಳಿಸಲು ನಡೆಯುತ್ತಿರುವ ಪ್ರಯತ್ನವನ್ನು ವಿರೋಧಿಸುತ್ತಿರುವುದು ಚುನಾವಣೆಯಲ್ಲಿ ಅಕ್ರಮವೆಸಗಲು ದುಸ್ತರವಾಗಿರುವ ಕಾರಣ, ಸಹಾಯಕರಾಗಿ ಈ ಪತ್ರವನ್ನು ಬರೆದಿದ್ದಾರೆ. ತೋಳ್ಬಲ, ಹಣ ಬಲ ಮತ್ತು ಭ್ರಷ್ಟ ಅಧಿಕಾರಿಗಳ ಬಲದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಲು ನಡೆಸಿದ್ದ ಷಡ್ಯಂತರ ವಿಫಲವಾಗಿ ಕಂಗಾಲಾಗಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.