ಸುಮಲತಾ ಏಜೆಂಟ್ ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರು
ಮಂಡ್ಯ, ಮಾ.31: ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಿಂಧುತ್ವ ಪ್ರಕರಣ ತೀವ್ರ ಗಮನ ಸೆಳೆದಿದ್ದು, ಈ ಸಂಬಂಧ ಆಕ್ಷೇಪಣೆ ಸಲ್ಲಿಸಿರುವ ಪಕ್ಷೇತರ ಅಭ್ಯರ್ಥಿ ಅಂಬರೀಷ್ ಸುಮಲತಾ ಅವರ ಚುನಾವಣಾ ಪ್ರತಿನಿಧಿ ಮದನ್‍ಕುಮಾರ್ ಅವರಿಂದ ಪ್ರಾದೇಶಿಕ ಆಯಕ್ತ ಅನಿಲ್‍ಕುಮಾರ್ ಹೇಳಿಕೆ ಪಡೆದಿದ್ದಾರೆ.
ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಶನಿವಾರ ನಗರಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ನಿರ್ಗಮಿಸಿದ ಬೆನ್ನಲ್ಲೇ, ರವಿವಾರ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುಮಾರು ಮೂರು ಗಂಟೆ ಮದನ್ ಅವರ ಹೇಳಿಕೆ ಪಡೆದರು.
ಇಲ್ಲವರೆಗೂ ನಡೆದಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರಾದೇಶಿಕ ಆಯಕ್ತರಿಗೆ ಮಾಹಿತಿ ನೀಡಿದ್ದೇನೆ. ಎಲ್ಲವನ್ನೂ ಅವರು ತಾಳ್ಮೆಯಿಂದ ಕೇಳಿದ್ದಾರೆ. ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ಅವರಿಂದಲೂ ಹೇಳಿಕೆ ಪಡೆಯಬಹುದು ಎಂದು ನಂತರ ಮದನ್ ಸುದ್ದಿಗಾರರಿಗೆ ತಿಳಿಸಿದರು.
ನಾಮಪತ್ರ ಸಲ್ಲಿಕೆಯಿಂದ ಆರಂಭವಾದ ಬೆಳವಣಿಗೆಗಳು. ನಾಮಪತ್ರ ಪರಿಶೀಲನೆ ವೇಳೆ ನಿಖಿಲ್ ಅವರ ನಾಮಪತ್ರಕ್ಕೆ ನಾನು ಸಲ್ಲಿಸಿದ್ದ ಆಕ್ಷೇಪಣೆ, ಪಡೆದುಕೊಂಡ ವೀಡಿಯೋ ನಕಲಿನ ಮಾಹಿತಿ, ಮುಖ್ಯ ಚುನಾವಣಾಧಿಕಾರಿಗೆ ನೀಡಿರುವ ದೂರಿನ ಬಗ್ಗೆ ಪ್ರಾದೇಶಿಕ ಆಯುಕ್ತರಿಗೆ ಮಾಹಿತಿ ನೀಡಿದ್ದೇನೆ. ನ್ಯಾಯ ಸಿಗುವ ವಿಶ್ವಾಸವಿದೆ. ಇಲ್ಲದಿದ್ದರೆ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು.
ನಾನು ಮಾಡಿರುವ ಆಕ್ಷೇಪಣೆಗೆ ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟವಾಗಿ ಉತ್ತರ ನೀಡಿಲ್ಲ. ಅವರು ನೀಡಿರುವ ಸ್ಪಷ್ಟನೆ ಸಂಶಯಾಸ್ಪದವಾಗಿವೆ. ನಿಖಿಲ್ ನಾಮಪತ್ರ ನೂನ್ಯತೆ ಸರಿಪಡಿಸಲಾಗಿದೆ ಎಂದು ಹೇಳುತ್ತಾರೆ. ಆದರೆ, ಸರಿಪಡಿಸಲಾದ ಅಫಿದಾವಿತ್‍ನ್ನು ನಾಮಪತ್ರ ಪರಿಶೀಲನೆ ವೇಳೆ ತೋರಿಸಿಲ್ಲ. ನೀಡಿರುವ ವೀಡಿಯೋ ಅಪೂರ್ಣವಾಗಿದೆ ಎಂದು ಅವರು ಆರೋಪಿಸಿದರು.
ತಾನು ನೀಡಿದ ದೂರಿನ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕ ರಂಜಿತ್‍ಕುಮಾರ್ ಐದು ಪುಟಗಳ ಲಿಖಿತ ರೂಪದಲ್ಲಿ ವಿವರಣೆ ನೀಡಿದ್ದಾರೆ. ಅವರು ನೀಡಿರುವ ಪತ್ರದಲ್ಲಿರುವ ಉಲ್ಲೇಖದಂತೆ ನಾಮಪತ್ರ ಪರಿಶೀಲನೆ ವೇಳೆಯಲ್ಲಿ ಸಂಪೂರ್ಣ ವಿಡಿಯೋ ಚಿತ್ರೀಕರಣವಾಗಿಲ್ಲ. ನೀವು ಆಕ್ಷೇಪಣೆ ವ್ಯಕ್ತಪಡಿಸಿದ ಸಂದರ್ಭದಲ್ಲಿ ಕ್ಯಾಮೆರಾಮೆನ್ ಕ್ಯಾಮೆರಾವನ್ನು ಬೇರೆಡೆಗೆ ತಿರುಗಿಸಿದ್ದರಿಂದ ಸಂಪೂರ್ಣ ವಿಡಿಯೋ ಚಿತ್ರೀಕರಣವಾಗಿಲ್ಲ. ಆದ್ದರಿಂದ ಕ್ಯಾಮೆರಾಮೆನ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ದೂರು ನೀಡಲಾಗಿದೆ ಎಂದು ವಿವರಣೆ ನೀಡಿದ್ದಾರೆ ಎಂದು ಮದನ್ ಹೇಳಿದರು.
ಇವೆಲ್ಲವನ್ನೂ ಗಮನಿಸಿದರೆ ಜಿಲ್ಲಾ ಚುನಾವಣಾಧಿಕಾರಿ, ಇತರೆ ಸಿಬ್ಬಂದಿಯನ್ನು ದುರುಪಯೋಗಪಡಿಸಿಕೊಂಡಿರುವಂತೆ ಕಾಣುತ್ತಿದ್ದು, ನುಣಿಚಿಕೊಳ್ಳುವ ಯತ್ನ ನಡೆದಿದೆ ಎನಿಸುತ್ತಿದೆ. ಏಕೆಂದರೆ, ನಾಮಪತ್ರ ಪರಿಶೀಲನೆ ವೀಡಿಯೋ ರೆಕಾರ್ಡ್ ಮಾಡಿದ ಕ್ಯಾಮೆರಾಮೆನ್ ಮೇಲೆ ಆರೋಪ ಹೊರಿಸಲು ಮುಂದಾಗಿದ್ದಾರೆ ಎಂದು ಮದನ್ ಗಂಭೀರ ಆರೋಪ ಮಾಡಿದರು.
ನಾಮಪತ್ರ ಪರಿಶೀಲನೆಯ ದಿನವೇ ಬೆಳಗ್ಗೆ 10 ಗಂಟೆಗೆ ನಿಖಿಲ್ ಪರ ಚುನಾವಣೆ ಏಜೆಂಟ್ ಹೊಸ ನಮೂನೆ ಸಲ್ಲಿಸಿದ್ದಾರೆ ಎನ್ನುವುದಾದರೆ, ಆ ದಿನ ಬೆಳಗ್ಗೆ ಅಭ್ಯರ್ಥಿ ನಿಖಿಲ್ ಮಂಡ್ಯದಲ್ಲಿದ್ದರಾ ಎಂಬ ಅನುಮಾನ ಕಾಡುತ್ತಿದೆ. ಅಲ್ಲದೆ, ಹೊಸ ನಮೂನೆ ಹಾಗೂ ಹಳೇ ನಮೂನೆ ಎರಡಲ್ಲೂ ಒಂದೇ ದಿನಾಂಕವಿದೆ. ಇದು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು.