×
Ad

ಭ್ರಷ್ಟಾಚಾರಿಗಳಿಗೆ ಮೋದಿ ಭಯ ಕಾಡುತ್ತಿದೆ : ಮಡಿಕೇರಿಯಲ್ಲಿ ಸ್ಮೃತಿ ಇರಾನಿ

Update: 2019-03-31 20:24 IST

ಮಡಿಕೇರಿ,ಮಾ.31:ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆ ಕೇವಲ ಮೋದಿಯವರ ಚುನಾವಣೆಯಲ್ಲ. ಇದು ಪ್ರತಿಯೋರ್ವ ಭಾರತೀಯರ ಗೌರವದ ಚುನಾವಣೆಯಾಗಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಇಡೀ ದೇಶದ ಬೆಂಬಲ ಅಗತ್ಯವೆಂದು ಕೇಂದ್ರ ರೇಷ್ಮೆ ಸಚಿವೆ ಸ್ಮ್ಮತಿ ಇರಾನಿ ಹೇಳಿದ್ದಾರೆ.

ಗೋಣಿಕೊಪ್ಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭ್ರಷ್ಟಾಚಾರದಲ್ಲಿಯೇ ಮುಳುಗೆದ್ದಿರುವ ಕಾಂಗ್ರೆಸ್ ಮುಖಂಡರು ಜಾಮೀನು ಪಡೆದುಕೊಂಡು ಆತಂಕದ ಜೀವನ ನಡೆಸುತ್ತಿದ್ದಾರೆ, ಭ್ರಷ್ಟಾಚಾರಿಗಳಿಗೆ ಮೋದಿ ಅವರ ಭಯ ಕಾಡುತ್ತಿದೆ ಎಂದು ಆರೋಪಿಸಿದರು.

ತೆರಿಗೆ ವಂಚಿಸಿದ ಭ್ರಷ್ಟಾಚಾರಿಗಳ ಮೇಲೆ ಐಟಿ ದಾಳಿಯಾದರೆ ಈ ರಾಜ್ಯದ ಮುಖ್ಯಮಂತ್ರಿ ಯಾಕೆ ಕಣ್ಣೀರು ಹಾಕಬೇಕು ಎಂದು ಸ್ಮೃತಿ ಇರಾನಿ ಪ್ರಶ್ನಿಸಿದರು. 

ಈ ಚುನಾವಣೆ ಮೂಲಕ 'ಕಾಮ್ ಧಾರ್' ಗಳು ಗೆಲ್ಲಬೇಕು, 'ನಾಮ್ ಧಾರ್' ಗಳು ಸೋಲುವಂತಾಗಬೇಕು ಎಂದೂ ಅವರು ಕರೆ ನೀಡಿದರು.

ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಸೇವಕನನ್ನಾಗಿಸುವ ಅನಿವಾರ್ಯತೆ ಈ ದೇಶಕ್ಕಿದೆ. ಮಹಾಘಟ್ ಬಂಧನ್ ನಾಯಕರು ಈ ಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವುದೇ ಮೋದಿಯ ನಿಜವಾದ ಶಕ್ತಿಗೆ ನಿದರ್ಶನವಾಗಿದೆ ಎಂದರು.

ವಿದೇಶ ಸುತ್ತುತ್ತಿದ್ದವರಿಗೆ ಏಕಾಏಕಿ ಅಯೋಧ್ಯೆ, ಗಂಗಾ ನದಿ ನೆನಪಾಗಬೇಕಾದರೆ ಮೋದಿಯವರೇ ಕಾರಣ ಎಂದು ವ್ಯಂಗ್ಯವಾಡಿದರು. 

ಭಯೋತ್ಪಾದಕರ ಹೆಣಕ್ಕೆ ಲೆಕ್ಕ ಕೊಡಿ ಎಂದು ಕಾಂಗ್ರೆಸ್ಸಿಗರು ಕೇಳುತ್ತಾರೆ ಎಂದು ಯೋಚಿಸಿರಲಿಲ್ಲ. ಆದರೆ, ಈ ಹೇಳಿಕೆಗಳ ಮೂಲಕ ಕಾಂಗ್ರೆಸ್ ಮುಖಂಡರ ನಿಜ ಬಣ್ಣ ಬಯಲಾಗಿದೆ ಎಂದು ಸ್ಮೃತಿ ಇರಾನಿ  ಹೇಳಿದರು. 

ಮುಂಬೈ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ಇಡೀ ದೇಶ ನ್ಯಾಯಕ್ಕಾಗಿ ಕೋರಿದರೂ ಕಾಂಗ್ರೆಸ್ ಮುಖಂಡರು ತೆಪ್ಪಗಿದ್ದರು. ಭಾರತೀಯ ಸೇನೆ ನಮಗೂ ಒಂದು ಅವಕಾಶ ನೀಡಿ, ಪಾಕಿಗಳನ್ನು ಬಗ್ಗುಬಡಿಯುತ್ತೇವೆ ಎಂದು ಕೋರಿದಾಗಲೂ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮೌನವಹಿಸಿದ್ದರು. ಸೋನಿಯಾ-ರಾಹುಲ್ ಗಾಂಧಿ ಅನುಮತಿಯನ್ನೇ ನೀಡಲಿಲ್ಲ ಎಂದು ಆರೋಪಿಸಿದರು.

ಭಾರತೀಯ ಸೈನಿಕರ ತಂಟೆಗೆ ಬಂದ ಭಯೋತ್ಪಾದಕರಿಗೆ ಮೋದಿ ಉರಿ ದಾಳಿಯ ಮೂಲಕ ಮತ್ತು ಭಾಲಕೋಟ್ ದಾಳಿಯ ಮೂಲಕ ಮರೆಯಬಾರದ ಪಾಠ ಕಲಿಸಿದೆ ಎಂದು ಸ್ಮೃತಿ ಇರಾನಿ  ಹೇಳಿದರು.

ಐದು ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆ ಬಗ್ಗೆ ಮಾಹಿತಿ ನೀಡಿದ ಸ್ಮೃತಿ ಇರಾನಿ, ಬ್ಯಾಂಕ್ ನಲ್ಲಿ ಖಾತೆಯೇ ಇಲ್ಲದಿದ್ದ ಭಾರತೀಯರಿಗೆ ಬ್ಯಾಂಕ್ ಖಾತೆ ತೆರೆಯಲು ಮೋದಿ ಕಾರಣರಾಗಿದ್ದು, ಜನ್ ಧನ್ ಯೋಜನೆಯಡಿ 30 ಕೋಟಿ ನಾಗರಿಕರಿಗೆ ಮೊದಲ ಬಾರಿಗೆ ಬ್ಯಾಂಕ್ ಖಾತೆ ದೊರಕಿದೆ. ಕರ್ನಾಟಕದಲ್ಲಿ 1.74 ಕೋಟಿ  ಗ್ರಾಹಕರು ಮೊದಲ ಬಾರಿಗೆ ಬ್ಯಾಂಕ್ ಖಾತೆ ತೆರೆಯುವಂತಾಗಿದೆ. 1 ಕೋಟಿ ನಕಲಿ ಖಾತೆಗಳ ಮೂಲಕ ಸರ್ಕಾರದ ಆರ್ಥಿಕ ನೆರವು ಪಡೆಯುತ್ತಿದ್ದ ಖದೀಮರ ಖಾತೆಗಳನ್ನು ಮೋದಿ ಸರ್ಕಾರ ಮುಟ್ಟುಗೋಲು ಹಾಕಿದೆ ಎಂದು ಹೇಳಿದರು. 

ಭಾರತದಲ್ಲಿ ಲಕ್ಷಗಟ್ಟಲೆ ಮಹಿಳೆಯರು ಹೊಗೆಯುಗುಳುವ ಒಲೆ ಮುಂದೆ ಕೆಮ್ಮುತ್ತಾ ಕುಳಿತು ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದನ್ನು ಗಮನಿಸಿಯೇ ಮೋದಿ ತಾವು ಪ್ರಧಾನಿಯಾದ ಕೂಡಲೇ ಎಲ್.ಪಿ.ಜಿ.ಅನಿಲವನ್ನು ವಿಳಂಭರಹಿತವಾಗಿ ಉಜ್ವಲ ಯೋಜನೆಯಡಿ ದೇಶದ 7 ಕೋಟಿ , ಕರ್ನಾಟಕದ 28 ಲಕ್ಷ ಮಹಿಳೆಯರಿಗೆ ನೀಡಿದರು. ಅಂತೆಯೇ ಶೌಚಾಲಯವಿಲ್ಲದ 9 ಕೋಟಿ ಕುಟುಂಬಗಳಿಗೆ ಶೌಚಾಲಯವನ್ನೂ ದೇಶದಲ್ಲಿ ಹಾಗೂ 45 ಲಕ್ಷ ಶೌಚಾಲಯವನ್ನು ಕರ್ನಾಟಕದಲ್ಲಿ  ಒದಗಿಸಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು. 5 ವರ್ಷದಲ್ಲಿ ಮೋದಿಯವರಂಥ ವ್ಯಕ್ತಿಯಿಂದ ಇಷ್ಟೆಲ್ಲಾ ಸಾಧನೆ ಸಾಧ್ಯವಾಗುವುದಾದಲ್ಲಿ ತಲತಲಾಂತರಗಳಿಂದ ದೇಶವನ್ನು ಆಳಿದ ಗಾಂಧಿ,  ವಾದ್ರಾ ಕುಟುಂಬದಿಂದ ಇದು ಅಸಾದ್ಯವಾಯಿತೇಕೆ ಎಂದೂ ಸ್ಮೃತಿ ಇರಾನಿ  ಪ್ರಶ್ನಿಸಿದರು. 

ಕಾರ್ಯಕ್ರಮದಲ್ಲಿ ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಹ್ಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್,  ಜಿಲ್ಲಾಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್, ವಿರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ, ಕೊಡಗು ಮಹಿಳಾ ಬಿಜೆಪಿ ಅಧ್ಯಕ್ಷ ಜಮುನಾ ಚಂಗಪ್ಪ,ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ಬಿಜೆಪಿ ಉಸ್ತುವಾರಿ ಫಣೀಂದ್ರ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಶಾಲಪ್ಪ, ಸುಜಾಕುಶಾಲಪ್ಪ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News