×
Ad

ಕಾಂಗ್ರೆಸ್-ಜೆಡಿಎಸ್ ಜಂಟಿ ಪ್ರಚಾರಕ್ಕೆ ಚಾಲನೆ

Update: 2019-03-31 21:59 IST

ಬೆಂಗಳೂರು, ಮಾ.31: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಜಂಟಿ ಚುನಾವಣಾ ಪ್ರಚಾರಕ್ಕೆ ನಗರದ ಬಿಐಇಸಿ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ಕಾರ್ಯಕರ್ತರ ಘೋಷಣೆ ಮುಗಿಲು ಮುಟ್ಟಿತ್ತು.

ಮೈದಾನದ ತುಂಬಾ ಕಾಂಗ್ರೆಸ್ - ಜೆಡಿಎಸ್ ಪಕ್ಷಗಳ ಭಾವುಟಗಳು ರಾರಾಜಿಸುತ್ತಿದ್ದವು. ರಾಹುಲ್ ಗಾಂಧಿ, ಸೋನಿಯಾಗಾಂಧಿ, ದೇವೇಗೌಡ, ಕುಮಾರಸ್ವಾಮಿ ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯರ ಒಂದೇ ಒಂದು ಫ್ಲೆಕ್ಸ್ ಇಲ್ಲದಂತೆ ನಿರ್ಬಂಧಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನೋಸ್ತೋಮ ರಾಹುಲ್ ಗಾಂಧಿ, ದೇವೇಗೌಡ, ಕುಮಾರಸ್ವಾಮಿಗೆ ಜೈಕಾರ ಕೂಗಿ, ಚೌಕಿದಾರ್ ಚೋರ್ ಹೈ, ಚೌಕಿದಾರ್ ಚೋರ್ ಹೈ ಎಂದು ಘೋಷಣೆಗಳನ್ನು ಕೂಗುತ್ತಿದ್ದ ದೃಶ್ಯಗಳು ಕಂಡು ಬಂದವು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಬಿಜೆಪಿ ಸರಕಾರ ಭಾರತವನ್ನು ಹಿಂದೂ ರಾಷ್ಟ್ರವಾಗಲು ಆರೆಸ್ಸೆಸ್ ಮೂಲಕ ಪ್ರಯತ್ನ ಮಾಡುತ್ತಿದೆ.

ಸಂಘಪರಿವಾರದ ಅಜೆಂಡಾವನ್ನು ದೇಶದ ಸಾಮಾನ್ಯ ಜನರ ಮೇಲೆ ಹೇರಲು ಬಿಜೆಪಿಯವರು ಹೊರಟಿದ್ದಾರೆ. ಇದು ಹಿಂದೂ ರಾಷ್ಟ್ರ ಅಲ್ಲ. ಎಲ್ಲ, ಧರ್ಮ, ಜಾತಿ, ವರ್ಗದ ಜನರೂ ಬದುಕುವ ಜಾತ್ಯಾತೀಯ ರಾಷ್ಟ್ರ. ಅದು ಹೀಗೇ ಉಳಿಯಲು ರಾಹುಲ್ ಗಾಂಧಿ ನಾಯಕತ್ವ ದೇಶಕ್ಕೆ ಬೇಕಾಗಿದೆ. ಅದಕ್ಕಾಗಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಕಾಂಗ್ರೆಸ್, ಜೆಡಿಎಸ್ ನಾಯಕರು ಒಟ್ಟಾಗಿ ಶ್ರಮಿಸಬೇಕು ಎಂದರು.

21 ಪ್ರಾದೇಶಿಕ ಪಕ್ಷಗಳು ಸೇರಿದಾಗ ಮೋದಿಗೆ ಸಹಿಸಲು ಆಗಲಿಲ್ಲ. ಅಲ್ಲಿಂದ ಮಹಾಘಟಬಂಧನ್‌ ಎಂಬುದನ್ನು ಕೆಟ್ಟ ಶಬ್ಧಗಳಿಂದ ವ್ಯಾಖ್ಯಾನ ಮಾಡಿದ್ದಾರೆ. ಎಲ್ಲವನ್ನೂ ನಾನೇ ಮಾಡಿದ್ದೇನೆ ಎಂಬ ಗರ್ವದಿಂದ ಮಾತನಾಡುತ್ತಾರೆ. ಎಲ್ಲವನ್ನೂ ನಾನು ಗಮನಿಸಿದ್ದೇನೆ ಎಂದು ಹೇಳಿದರು.

ದೇಶಕ್ಕೆ ಹೊಸ ಸಂದೇಶ ಕೊಡುತ್ತೇವೆ ಎಂಬ ಮನವಿ ಮೇರೆಗೆ ರಾಹುಲ್‌ ಗಾಂಧಿ ಇಲ್ಲಿಗೆ ಬಂದಿದ್ದಾರೆ. ಮೇ 23ರಂದು ಕೊಟ್ಟ ಸಂದೇಶದಂತೆ, ದೇಶದಲ್ಲಿ ಮೈತ್ರಿ ಸರಕಾರ ಯಾವುದೇ ವ್ಯತ್ಯಾಸ ಇಲ್ಲದೆ 28 ಕ್ಷೇತ್ರಗಲ್ಲಿ ಹೋರಾಟ ಮಾಡುತ್ತೇವೆ ಎಂದರು.

ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕೋಮುವಾದಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಕೇಂದ್ರದಲ್ಲಿ ಐದು ವರ್ಷದ ಆಡಳಿತದಲ್ಲಿ ದೇಶವನ್ನೇ ಹಾಳುಮಾಡಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಸರಣಿ ಹತ್ಯೆಗಳು ನಡೆಯುತ್ತಿವೆ. ಇಂತ ಅನಿಶ್ಚಿತತೆ ತಡೆದು, ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡಲು ಎಲ್ಲಾ ಜಾತ್ಯಾತೀತ ಶಕ್ತಿಗಳು, ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ, ಸಮಾನತೆ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರುವ ಎಲ್ಲರೂ ಒಂದಾಗಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರು ಕಾರ್ಯಕರ್ತರು, ಮತದಾರರು ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಕರ್ನಾಟಕದ ರಾಜಧಾನಿ ಬೆಂಗಳೂರಿಂದಲೇ ಒಗ್ಗಟ್ಟಿನ ಸಂದೇಶ ದೇಶಕ್ಕೆ ರವಾನೆ ಆಗಬೇಕು. ರಾಹುಲ್ ಗಾಂಧಿ ಅವರು ದೇಶದ ಚುಕ್ಕಾಣಿ ಹಿಡಿಯಬೇಕು. ಹಾಗಾಗಿ ಮೈತ್ರಿ ಪಕ್ಷಗಳ ಈ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ.ದೇಶದ ಜನ ಪ್ರಜ್ಞಾವಂತರಿದ್ದಾರೆ. ದೇಶಕ್ಕೆ, ಸಂವಿಧಾನಕ್ಕೆ ಅಪಾಯ ಬಂದಾಗ ದೇಶದ ಪ್ರಜ್ಞಾವಂತ ಜನ ಎಚ್ಚೆತ್ತುಕೊಂಡು, ಸಿಡಿದೇಳುತ್ತಾರೆ ಎಂದು ನುಡಿದರು.

ವೇದಿಕೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಾ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಆರ್.ವಿ. ದೇಶಪಾಂಡೆ, ಸಂಸದರಾದ ಮುನಿಯಪ್ಪ, ಮಾಜಿ ಸಚಿವ ಮಹದೇವಪ್ಪ, ಜೆಡಿಎಸ್ ಶಾಸಕರಾದ ಗೋಪಾಲಯ್ಯ, ಟಿ.ಎ.ಶರವಣ, ಜೆಡಿಎಸ್ ಕಾರ್ಯಾಧ್ಯಕ್ಷ ನಾರಾಯಣರಾವ್ ಸೇರಿದಂತೆ ಮೈತ್ರಿ ಪಕ್ಷಗಳ ಅನೇಕ ನಾಯಕರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News